ಸುಪ್ರೀಂ ಕೋರ್ಟ್ ಹೆಸರಲ್ಲೇ ನಕಲಿ ಆದೇಶ ಪತ್ರ ನೀಡಿ ಪರಪ್ಪನ ಅಗ್ರಹಾರ ಜೈಲಿಂದ ಪರಾರಿ: 8 ವರ್ಷಗಳ ಬಳಿಕ ಕೈದಿಯ ಕೃತ್ಯ ಬಯಲು
Views: 16
ಕನ್ನಡ ಕರಾವಳಿ ಸುದ್ದಿ: ಸುಪ್ರೀಂ ಕೋರ್ಟ್ ಹೆಸರಲ್ಲೇ ನಕಲಿ ಆದೇಶ ಪತ್ರ ಸೃಷ್ಟಿಸಿ, ಜೈಲಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಜೈಲಿನಿಂದ ರಾಜಾರೋಷವಾಗಿ ಬಿಡುಗಡೆಯಾಗಿದ್ದ ಖತರ್ನಾಕ್ ಕೈದಿಯೊಬ್ಬನ ಮಹಾ ವಂಚನೆ ಎಂಟು ವರ್ಷಗಳ ಬಳಿಕ ಬೆಳಕಿಗೆ ಬಂದಿದೆ. ಈ ಸಿನಿಮಾ ಶೈಲಿಯ ವಂಚನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದಾಖಲೆ ಫೋರ್ಜರಿ ಮತ್ತು ವಂಚನೆ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ: 2001ರಲ್ಲಿ ತಮಿಳುನಾಡು ಮೂಲದ ಶಂಕರ್ ಆರ್ಮುಗಮ್ ಮತ್ತು ಆತನ ಗ್ಯಾಂಗ್, ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕಿಡ್ನಾಪ್ ಮಾಡಿತ್ತು. ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಬೆಂಗಳೂರಿನ ಫಾಸ್ಟ್ ಟ್ರ್ಯಾಕ್ ಕೋರ್ಟ್, ಶಂಕರ್‌ನನ್ನು ಅಪರಾಧಿ ಎಂದು ಘೋಷಿಸಿತ್ತು. ಹಣಕ್ಕಾಗಿ ಅಪಹರಣ (ಸೆಕ್ಷನ್ 364A) ಮತ್ತು ಅಪರಾಧಿಕ ಸಂಚು (ಸೆಕ್ಷನ್ 120B) ಅಡಿಯಲ್ಲಿ ನ್ಯಾಯಾಲಯವು ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಕೋರ್ಟ್ ಆದೇಶದಂತೆ ಆರೋಪಿ ಶಂಕರ್‌ನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.
ಜೈಲಿನಲ್ಲಿದ್ದ ಶಂಕರ್ ಆರ್ಮುಗಮ್ ಬಿಡುಗಡೆಯಾಗಲು ದೊಡ್ಡದೊಂದು ಸಂಚು ರೂಪಿಸಿದ್ದ. ತನಗೆ ಸುಪ್ರೀಂ ಕೋರ್ಟ್‌ನಿಂದ ಬಿಡುಗಡೆ ಆದೇಶ ಸಿಕ್ಕಿದೆ ಎಂದು ಬಿಂಬಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್‌ನ ನಕಲಿ ಮುದ್ರೆ ಹಾಗೂ ಸಹಿ ಇರುವ ಫೋರ್ಜರಿ ದಾಖಲೆಗಳನ್ನು ಸೃಷ್ಟಿಸಿದ್ದ. ನವೆಂಬರ್ 13, 2018 ರಂದು ಈ ನಕಲಿ ಆದೇಶ ಪತ್ರದೊಂದಿಗೆ 10 ಸಾವಿರ ರೂಪಾಯಿ ದಂಡವನ್ನು ಶಂಕರ್ ಕಡೆಯವರು ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ಪಾವತಿಸಿದ್ದರು. ಇದನ್ನು ನಿಜವಾದ ಆದೇಶ ಎಂದು ನಂಬಿದ ಜೈಲಧಿಕಾರಿಗಳು ಆತನನ್ನು ಬಿಡುಗಡೆ ಮಾಡಿದ್ದರು. ಅಲ್ಲಿಂದ ಆತ ಪರಾರಿಯಾಗಿದ್ದ.
ಅಧಿಕಾರಿಗಳ ಕಣ್ಣು ತಪ್ಪಿಸಿ ಜೈಲಿನಿಂದ ಬಿಡುಗಡೆಯಾಗಿದ್ದ ಶಂಕರ್ ಕಥೆ ಮುಗಿಯಿತು ಎನ್ನುವಾಗಲೇ ಇತ್ತೀಚೆಗೆ ಜೈಲು ಇಲಾಖೆಯ ಮಹಾನಿರ್ದೇಶಕರಿಗೆ ಒಂದು ಆಘಾತಕಾರಿ ಅನಾಮಧೇಯ ಪತ್ರ ಬಂದಿತ್ತು. ಆ ಪತ್ರದಲ್ಲಿ ಶಂಕರ್ ನಕಲಿ ದಾಖಲೆ ನೀಡಿ ಓಡಿಹೋಗಿರುವ ಬಗ್ಗೆ ಉಲ್ಲೇಖಿಸಲಾಗಿತ್ತು.
ಈ ಅನಾಮಧೇಯ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ಜೈಲು ಇಲಾಖೆ ಆಂತರಿಕ ತನಿಖೆಗೆ ಆದೇಶಿಸಿತ್ತು. ತನಿಖೆಯ ವೇಳೆ ಜೈಲಧಿಕಾರಿಗಳು ಸುಪ್ರೀಂ ಕೋರ್ಟ್‌ನಿಂದ ಈ ಆದೇಶದ ಸತ್ಯಾಸತ್ಯತೆಯನ್ನು ಮರು ಪರಿಶೀಲಿಸಿದಾಗ, ಸುಪ್ರೀಂ ಕೋರ್ಟ್‌ನಿಂದ ಅಂತಹ ಯಾವುದೇ ಬಿಡುಗಡೆ ಆದೇಶ ಬಂದೇ ಇಲ್ಲ, ಶಂಕರ್ ಸಲ್ಲಿಸಿದ್ದು ನಕಲಿ ಪತ್ರ ಎಂಬ ಕಹಿ ಸತ್ಯ ಹೊರಬಿದ್ದಿದೆ.
ವಿಷಯ ಬೆಳಕಿಗೆ ಬರುತ್ತಿದ್ದಂತೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಶಂಕರ್ ಆರ್ಮುಗಮ್‌ಗಾಗಿ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದಾರೆ.
ಮತ್ತೊಂದೆಡೆ, ದೇಶದ ಅತ್ಯುನ್ನತ ನ್ಯಾಯಾಲಯದ ಆದೇಶವನ್ನು ಜೈಲು ಅಧಿಕಾರಿಗಳು ಯಾವುದೇ ಮರು ಪರಿಶೀಲನೆ ಮಾಡದೆ ಹೇಗೆ ಬಿಟ್ಟರು? ಇದರಲ್ಲಿ ಜೈಲು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವಿದೆಯೇ ಅಥವಾ ಅವರೂ ಸಹ ಆರೋಪಿಯೊಂದಿಗೆ ಶಾಮೀಲಾಗಿದ್ದಾರೆಯೇ? ಎಂಬ ಅನುಮಾನಗಳು ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.






