ಶಿಕ್ಷಣ

ಮರವಂತೆ ಸರಕಾರಿ ಶಾಲೆಯಲ್ಲಿ ಮಕ್ಕಳ ಸಂತೆ ಉದ್ಘಾಟನೆ 

"ಮಕ್ಕಳಿಂದ ನಿರ್ವಹಿಸಲ್ಪಟ್ಟ ಐವತ್ತರಷ್ಟು ಅಂಗಡಿಗಳಲ್ಲಿ ತರಕಾರಿ, ತಿನಿಸು, ಪಾನೀಯ, ಬಟ್ಟೆಬರೆ, ಮೀನು, ಸ್ಟೇಶನರಿ, ಹಣ್ಣು ಇತ್ಯಾದಿ ಸರಕುಗಳಿದ್ದುವು. ಬೆಳಗ್ಗಿನಿಂದ ಮಧ್ಯಾಹ್ನದ ತನಕ ಪೋಷಕರು, ಸಾರ್ವಜನಿಕರು ಆಗಮಿಸಿ ಖರೀದಿಸುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಿದರು." 

Views: 50

ಕನ್ನಡ ಕರಾವಳಿ ಸುದ್ದಿ: ಮಕ್ಕಳು ತಮ್ಮ ಕಲಿಕಾ ಅವಧಿಯಲ್ಲಿಯೇ ವ್ಯವಹಾರ ಕುಶಲತೆಯನ್ನು ಕರಗತ ಮಾಡಿಕೊಳ್ಳಲು ಮಕ್ಕಳ ಸಂತೆ ಸಹಕಾರಿಯಾಗುತ್ತದೆ. ವ್ಯವಹಾರದಲ್ಲಿ ಲಾಭ, ನಷ್ಟ ಗಳಿಕೆಗೆ ಕಾರಣವಾಗುವ ಅಂಶಗಳನ್ನು ಅವರು ಪ್ರತ್ಯಕ್ಷವಾಗಿ ಅರಿತುಕೊಳ್ಳುತ್ತಾರೆ ಎಂದು ಮರವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ ಖಾರ್ವಿ ಹೇಳಿದರು.

ಈಚೆಗೆ ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಸಂತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ ಶ್ಯಾನುಭಾಗ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿದ್ದ ಬೈಂದೂರು ವಲಯ ಸಂಪನ್ಮೂಲ ಸಮನ್ವಯಾಧಿಕಾರಿ ಪ್ರದೀಪಕುಮಾರ ಶೆಟ್ಟಿ ಮಾತನಾಡಿ ಮಕ್ಕಳಿಗೆ ಕಲಿಕೆಯ ಅವಧಿಯಲ್ಲಿ ಅನೌಪಚಾರಿಕವಾಗಿ ಕೂಡ ವ್ಯವಹಾರ ಜ್ಞಾನ ಗಳಿಸಲು ಅವಕಾಶವಿಲ್ಲ. ಉದ್ಯಮಶೀಲತೆ ಶಿಕ್ಷಿತರಲ್ಲಿ ಇರಬೇಕಾದ ಮಹತ್ವದ ಕೌಶಲ. ಮಕ್ಕಳ ಸಂತೆಯಲ್ಲಿ ಕೊಡುಕೊಳ್ಳುವ ಚಟುವಟಿಕೆಗಳ ಮೂಲಕ ಅದರ ಆರಂಭಿಕ ಪಾಠ ಅವರಿಗೆ ಸಿಗುತ್ತದೆ ಎಂದು ಹೇಳಿ ಅದರಲ್ಲಿ ಮಕ್ಕಳನ್ನು ಸಕ್ರಿಯವಾಗಿ ತೊಡಗಿಸಿದ ಶಿಕ್ಷಕರನ್ನು ಮತ್ತು ಉತ್ಸಾಹದಿಂದ ಪಾಲ್ಗೊಂಡ ವಿದ್ಯಾರ್ಥಿಗಳನ್ನು ಅವರು ಅಭಿನಂದಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗಣೇಶ ಪೂಜಾರಿ, ಹಾಲಿ ಸದಸ್ಯ ನಾಗರಾಜ ಪಟಗಾರ್, ಶಿಕ್ಷಕ ಸಂಯೋಜಕ ಸತ್ಯನಾ ಕೊಡೇರಿ, ಸಾಧನಾ ಸದಸ್ಯ ದೇವಿದಾಸ ಶ್ಯಾನುಭಾಗ್, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶಾರದಾ ಪೂಜಾರಿ, ಸದಸ್ಯರು, ವಿದ್ಯಾರ್ಥಿ ನಾಯಕ ಪ್ರತೀಕ್ ಇದ್ದರು.
ಮುಖ್ಯೋಪಾಧ್ಯಾಯ ಸೀತಾರಾಮ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಅದ್ವಿಕಾ ಪ್ರಾಸ್ತಾವಿಸಿ, ಸಂಚಿತಾ ನಿರೂಪಿಸಿದರು. ಅನ್ವಿತಾ ವಂದಿಸಿದರು. ಗಣಿತ ಶಿಕ್ಷಕರಾದ ನಿರ್ಮಲಾ ಪೂಜಾರಿ, ಚಂದ್ರ ನೇತೃತ್ವದಲ್ಲಿ ಆಯೋಜನೆಯಾದ ಕಾರ್ಯಕ್ರಮದಲ್ಲಿ ಎಲ್ಲ ಬೋಧಕರು ಸಹಕರಿಸಿದ್ದರು.

Related Articles

Back to top button