ಮಂಡ್ಯಕ್ಕೆ ಕುಮಾರಸ್ವಾಮಿಯನ್ನೇ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿ: ಕಾರ್ಯಕರ್ತರು, ಮುಖಂಡರ ಒತ್ತಾಯ

Views: 28
ಕುಮಾರಸ್ವಾಮಿ ಭೇಟಿ ಮಾಡಲು ಜೆ. ಪಿ. ನಗರದ ನಿವಾಸಕ್ಕೆ ಮಂಡ್ಯದಿಂದ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ಆಗಮಿಸಿದ್ದರು. ಆದರೆ ಅವರನ್ನು ನಿಖಿಲ್ ಕುಮಾರಸ್ವಾಮಿ ಭೇಟಿ ಮಾಡಿದರು.
ಮಂಡ್ಯದ ಹಾಲಿ ಸಂಸದೆ ಸುಮಲತಾಗೆ ಟಿಕೆಟ್ ಕೈ ತಪ್ಪಿದೆ. ಬಿಜೆಪಿ ಅಧಿಕೃತವಾಗಿ ಮಂಡ್ಯ, ಹಾಸನ ಮತ್ತು ಕೋಲಾರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಆದರೆ ಅಭ್ಯರ್ಥಿ ಯಾರು? ಎಂಬುದು ಎಲ್ಲರ ಪ್ರಶ್ನೆ.
ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ ಈಗಾಗಲೇ ಸಭೆ ನಡೆಸಿದ್ದಾರೆ. ಸ್ಥಳೀಯ ನಾಯಕರ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಆದರ ಸಭೆಯಲ್ಲಿ ಅಭ್ಯರ್ಥಿ ಬಗ್ಗೆ ಗುಟ್ಟುಬಿಟ್ಟುಕೊಟ್ಟಿಲ್ಲ. ಸೇರಿದ ಜನ ಮಾತ್ರ ಕುಮಾರಸ್ವಾಮಿಯೇ ಅಭ್ಯರ್ಥಿಯಾಗಬೇಕೆಂದು ಒತ್ತಾಯ ಕೇಳಿ ಬಂದಿದೆ.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಆರೋಗ್ಯವಾಗಿದ್ದು, ಬೆಂಗಳೂರಿನ ಜೆ. ಪಿ. ನಗರದ ನಿವಾಸಕ್ಕೆ ಭಾನುವಾರ ಬೆಳಗ್ಗೆ ವಾಪಸ್ ಆಗಿದ್ದಾರೆ.
ಎಚ್. ಡಿ. ಕುಮಾರಸ್ವಾಮಿ ಭೇಟಿ ಮಾಡಲು ಜೆ. ಪಿ. ನಗರದ ನಿವಾಸಕ್ಕೆ ಮಂಡ್ಯದಿಂದ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ಆಗಮಿಸಿದ್ದರು. ಆದರೆ ಅವರನ್ನು ನಿಖಿಲ್ ಕುಮಾರಸ್ವಾಮಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರೇ ಅಭ್ಯರ್ಥಿ ಆಗಬೇಕು. ಅವರ ಉಮೇದುವಾರಿಕೆಯನ್ನು ಈ ಕ್ಷಣದಲ್ಲಿಯೇ ಘೋಷಣೆ ಮಾಡಬೇಕು ಎಂದು ಕಾರ್ಯಕರ್ತರು, ಮುಖಂಡರು ಒತ್ತಾಯ ಮಾಡಿದರು.
ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಮಂಡ್ಯ ಕ್ಷೇತ್ರ ಜೆಡಿಎಸ್ ಪಕ್ಷಕ್ಕೆ ಸಿಕ್ಕಿದೆ. ಕಾಂಗ್ರೆಸ್ ಈಗಾಗಲೇ ಸ್ಟಾರ್ ಚಂದ್ರು ಮಂಡ್ಯದ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಆದರೆ ಎದುರಾಳಿ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ.
ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರು ಭಾನುವಾರ ಪಕ್ಷದ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಆದರೆ ಅವರು ಸಹ ಅಭ್ಯರ್ಥಿ ಯಾರು? ಎಂದು ಘೋಷಣೆ ಮಾಡಿಲ್ಲ. ಕುಮಾರಸ್ವಾಮಿ ಸ್ಪರ್ಧೆಗೆ ಹೆಚ್ಚು ಒತ್ತಡವಿದೆ.
ಆದರೆ ಚನ್ನಪಟ್ಟಣ ಕ್ಷೇತ್ರದ ಹಾಲಿ ಶಾಸಕ ಎಚ್. ಡಿ. ಕುಮಾರಸ್ವಾಮಿ ಮಂಡ್ಯದಿಂದ ಲೋಕಸಭೆ ಚುನಾವಣಾ ಕಣಕ್ಕಿಳಿಯುತ್ತಾರಾ? ಎಂಬುದು ಎಲ್ಲರ ಪ್ರಶ್ನೆ. ಅಲ್ಲದೇ ಆರೋಗ್ಯದ ಕಾರಣದಿಂದ ಅವರು ಚುನಾವಣೆ ಹಿಂದೆ ಸರಿಯಬಹುದು ಎಂಬ ಮಾತು ಸಹ ಕೇಳಿ ಬರುತ್ತಿದೆ
2019ರಲ್ಲಿ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದರು. ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ಸೋಲು ಕಂಡಿದ್ದರು. ಈ ಬಾರಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಜೆಡಿಎಸ್ ಚುನಾವಣೆ ಎದುರಿಸುತ್ತಿದ್ದು, ನಿಖಿಲ್ ಅಭ್ಯರ್ಥಿಯಾಗಬಹುದು ಎಂಬ ಸುದ್ದಿಯೂ ಹಬ್ಬಿದೆ.
ಎಚ್. ಡಿ. ಕುಮಾರಸ್ವಾಮಿ ಹಲವು ಬಾರಿ ಅಭ್ಯರ್ಥಿ ಯಾರು? ಎಂಬ ಬಗ್ಗೆ ಮಾತನಾಡಿದ್ದಾರೆ. ಆದರೆ ಸ್ವತಃ ಕಣಕ್ಕಿಳಿಯುವ ಕುರಿತು ಯಾವುದೇ ಸೂಚನೆ ನೀಡಿಲ್ಲ. ಮಾರ್ಚ್ 25ರಂದು ಅಭ್ಯರ್ಥಿಗಳ ಪಟ್ಟಿಯನ್ನು 3 ಕ್ಷೇತ್ರಗಳಿಗೆ ಘೋಷಣೆ ಮಾಡಲಾಗುತ್ತದೆ ಎಂದು ಈ ಹಿಂದೆ ಹೇಳಿದ್ದರು. ಆದ್ದರಿಂದ ಸೋಮವಾರ ಮಂಡ್ಯ ಅಭ್ಯರ್ಥಿ ಯಾರು? ಎಂಬ ಕುತೂಹಲಕ್ಕೆ ತೆರೆ ಬೀಳುವ ನಿರೀಕ್ಷೆ ಇದೆ.