ಮಂಗಳೂರು:ರಾತ್ರಿ ಊಟ ಸೇವಿಸಿದ ಬಳಿಕ 137ಕ್ಕೂ ಹೆಚ್ಚು ಹಾಸ್ಟೆಲ್ ನರ್ಸಿಂಗ್ ವಿದ್ಯಾರ್ಥಿನಿಯರು ಅಸ್ವಸ್ಥ

Views: 83
ಮಂಗಳೂರು: ಸುಮಾರು 137 ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯರು ರಾತ್ರಿ ಊಟ ಸೇವಿಸಿದ ನಂತರ ಅಸ್ವಸ್ಥಗೊಂಡ ಘಟನೆ ಮಂಗಳೂರಿನ ಶಕ್ತಿನಗರದ ಖಾಸಗಿ ಹಾಸ್ಟೆಲ್‌ನಲ್ಲಿ ನಡೆದಿದೆ. ರಾತ್ರಿ ಈ ಘಟನೆ ನಡೆದಿದ್ದು ತಡ ರಾತ್ರಿ ವಿದ್ಯಾರ್ಥಿನಿಯರನ್ನು ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಸೇರಿಸಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮತ್ತೊಂದೆಡೆ ತಮ್ಮ ಮಕ್ಕಳು ಅಸ್ವಸ್ಥಗೊಂಡ ವಿಚಾರ ತಿಳಿಯುತ್ತಿದ್ದಂತೆ ವಿದ್ಯಾರ್ಥಿನಿಯರ ಪೋಷಕರು ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ. 12 ವಿದ್ಯಾರ್ಥಿಗಳು ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಅನೇಕ ವಿದ್ಯಾರ್ಥಿಗಳಿಗೆ ಫುಡ್ ಪಾಯಿಸನ್ ಆಗಿರುವ ಶಂಕೆ ವ್ಯಕ್ತವಾಗಿದೆ. ಆಸ್ಪತ್ರೆ ಮುಂದೆ ಜಮಾಯಿಸಿರುವ ಪೋಷಕರು ನರ್ಸಿಂಗ್ ಕಾಲೇಜು ಆಡಳಿತ ಮಂಡಳಿ ವಿರುದ್ಧ ನಿರ್ಲಕ್ಷ್ಯ ಆರೋಪ ಹೇರಿದ್ದು ಆಕ್ರೋಶ ಹೊರ ಹಾಕಿದ್ದಾರೆ.
ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ಘಟನೆ ಹಿಂದಿನ ಕಾರಣವನ್ನು ಹುಡುಕಲಾಗುತ್ತಿದೆ ಎಂದರು. “ರಾತ್ರಿ 9 ಗಂಟೆ ಸುಮಾರಿಗೆ ನಗರದ ಆಸ್ಪತ್ರೆಯ ಮುಂದೆ ಸುಮಾರು 400-500 ಜನರು ಜಮಾಯಿಸಿದ್ದರು. ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಮತ್ತು ಉಳಿದವರು ಅವರ ಕುಟುಂಬ ಸದಸ್ಯರಿದ್ದರು. ಬೆಳಗಿನ ಜಾವ 2 ಗಂಟೆಯಿಂದ 100 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಫುಡ್ ಪಾಯಿಸನ್ ದೂರುಗಳನ್ನು ದಾಖಲಿಸಿದ್ದಾರೆ. 137 ವಿದ್ಯಾರ್ಥಿಗಳನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದಷ್ಟು ಬೇಗ ಈ ಘಟನೆಗೆ ಸೂಕ್ತ ಕಾರಣವನ್ನು ಪತ್ತೆಹಚ್ಚುತ್ತೇವೆ ಎಂದು ಶಶಿಕುಮಾರ್ ತಿಳಿಸಿದರು.
ಎಲ್ಲಾ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. “ಜನರಲ್ ನರ್ಸಿಂಗ್ ಮತ್ತು ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳು ರಾತ್ರಿ ಆಹಾರ ಸೇವನೆ ಬಳಿಕ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ವಿದ್ಯಾರ್ಥಿಗಳು ಗಾಬರಿಗೊಂಡಿದ್ದಾರೆ. ಸುಮಾರು 130 ವಿದ್ಯಾರ್ಥಿಗಳು ಚಿಕಿತ್ಸೆ ಪಡೆದಿದ್ದಾರೆ. ಆತಂಕ ಅಥವಾ ಭಯಪಡುವ ಅಗತ್ಯವಿಲ್ಲ, ನಾವು ಹಾಸ್ಟೆಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಇದುವರೆಗೆ ಯಾವುದೇ ಪ್ರಾಣಾಪಾಯ ವರದಿಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ನಿರೀಕ್ಷಕ ಡಾ ಅಶೋಕ್ ತಿಳಿಸಿದ್ದಾರೆ.