ರಾಜಕೀಯ

ಬೇರಾವುದೇ ಕ್ಷೇತ್ರ ಬೇಡ.. ಮಂಡ್ಯ ಬೇಕೆ ಬೇಕು.. ಲೋಕಸಭಾ ಟಿಕೆಟ್​ಗಾಗಿ ಸುಮಲತಾ ಬಿಗಿಪಟ್ಟು..!

Views: 42

ಬೆಂಗಳೂರು: ಜೆಡಿಎಸ್​ ಭದ್ರಕೋಟೆ ಆಗಿದ್ದ ಮಂಡ್ಯವನ್ನು ಮರಳಿ ವಶಕ್ಕೆ ಪಡೆಯಲು ಕಸರತ್ತು ಮಾಡ್ತಿರುವ ಜೆಡಿಎಸ್ಗೆ, ಸಂಸದೆ ಶಾಕ್​ ನೀಡಿದ್ದಾರೆ. ದೆಹಲಿ ಅಂಗಳದಲ್ಲೇ ಸುಮಲತಾ ಉರುಳಿಸಿದ್ದು, ಮಂಡ್ಯ ಲೋಕಸಭಾ ಟಿಕೆಟ್​ಗಾಗಿ ಸುಮಲತಾ ಬಿಗಿಪಟ್ಟು ಹಿಡಿದಿದ್ದಾರೆ. ಇದು ದಳಪತಿಗೆ ಟೆನ್ಷನ್​ ಹೆಚ್ಚಿಸಿದೆ

ಲೋಕಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜ್ಯದಲ್ಲಿ ಚಟುವಟಿಕೆ ಬಿರುಸುಗೊಂಡಿದೆ. ಕಳೆದ 2019ರ ಲೋಕಸಭೆ ಚುನಾವಣೆ ವೇಳೆ ಇಡೀ ಇಂಡಿಯಾದ ಗಮನ ಸೆಳೆದಿದ್ದ ಮಂಡ್ಯ, ಈ ಬಾರಿ ಕುತೂಹಲದ ಅಖಾಡವಾಗಿ ಮಾರ್ಪಟ್ಟಿದೆ. ಒಂದೆಡೆ ದಳಪತಿಗಳು ಮಂಡ್ಯವನ್ನು ಮರಳಿ ವಶಕ್ಕೆ ಪಡೆಯಲು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ರೆ, ಮತ್ತೊಂದೆಡೆ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಗೆ ಬೆಂಬಲ ನೀಡಿದ್ದ  ಸಂಸದ ಸುಮಲತಾ. ಮಂಡ್ಯವನ್ನು ಬಿಟ್ಟುಕೊಡೋ ಮಾತೇ ಇಲ್ಲ ಎಂದು ಬಿಗಿಪಟ್ಟು ಹಿಡಿದಿದ್ದಾರೆ. ಸದ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಡ್ಯ ಲೋಕಸಭಾ ಅಖಾಡದ ಚರ್ಚೆ ​ಜೋರಾಗಿದೆ.

ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಜೆಡಿಎಸ್​, ಬಿಜೆಪಿ ಮೈತ್ರಿ ಮಾಡಿಕೊಂಡು ಕಾಂಗ್ರೆಸ್​ಗೆ ಮಣ್ಣುಮುಕ್ಕಿಸಲು ರಣತಂತ್ರ ರೂಪಿಸುತ್ತಿದ್ದಾರೆ.. ಆದ್ರೆ, ಮಂಡ್ಯ ಕ್ಷೇತ್ರ ಎರಡೂ ಪಕ್ಷಕ್ಕೂ ಕಬ್ಬಿಣದ ಕಡಲೆಯಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಈಗಾಗಲೇ ಮಾಜಿ ಸಿಎಂ ಕುಮಾರಸ್ವಾಮಿ ಅಖಾಡಕ್ಕೆ ಇಳಿದಿದ್ದು, ಮಂಡ್ಯ ಜನರ ಕಣ್ಣಳತೆಯಲ್ಲೇ ಓಡಾಡುತ್ತಿದ್ದಾರೆ. ಇದರ ಬೆನ್ನಲೇ ಇಷ್ಟು ದಿನ ಸೈಲೆಂಟ್​ ಆಗಿದ್ದ ಸ್ವಾಭಿಮಾನಿ ಸಂಸದೆ ಸುಮಲತಾ, ದೆಹಲಿಯಿಂದಲೇ ದಾಳ ಉರುಳಿಸಿದ್ದಾರೆ. ಸಂಸತ್​ ಬಜೆಟ್​ ಅಧಿವೇಶನಕ್ಕಾಗಿ ದೆಹಲಿಗೆ ಹೋಗಿರುವ ಸುಮಲತಾ, ಬಿಜೆಪಿಯ ಪ್ರಮುಖ ನಾಯಕರನ್ನು ಭೇಟಿಯಾಗುತ್ತಾ, ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿಯಿಂದ ಮೈತ್ರಿ ಅಭ್ಯರ್ಥಿ ಆಗಲಿ ಎಂದು ಪಟ್ಟು ಹಿಡಿದಿದ್ದಾರೆ.. ಖುದ್ದು ಪ್ರಧಾನಿ ಮೋದಿಯವರನ್ನೂ ಭೇಟಿ ಮಾಡಿ ಮಂಡ್ಯ ಟಿಕೆಟ್​ಗಾಗಿ ಲಾಭಿ ನಡೆಸಿದ್ದಾರೆ.

ಮಂಡ್ಯ ಕ್ಷೇತ್ರದ ಟಿಕೆಟ್​ ಅನ್ನು ತನಗೇ ನೀಡುವಂತೆ ಬಿಜೆಪಿ ವರಿಷ್ಠರಿಗೆ ಸುಮಲತಾ ಒತ್ತಡ ಹಾಕಿದ್ದಾರೆ. ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್​ ಭೇಟಿಯಾಗಿ, ಮಂಡ್ಯ ಕ್ಷೇತ್ರವನ್ನ ಜೆಡಿಎಸ್​ಗೆ ಬಿಟ್ಟುಕೊಡದಂತೆ ಸುಮಲತಾ ಪಟ್ಟು ಹಿಡಿದಿದ್ದಾರೆ.. ಮಂಡ್ಯ ಹೊರತು ನನಗೆ ಬೇರಾವುದೇ ಕ್ಷೇತ್ರ ಬೇಡ. ಮಂಡ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರುತ್ತೇನೆ ಎಂದು ತಮ್ಮ ಸ್ಪಷ್ಟ ನಿಲುವನ್ನು ವರಿಷ್ಟರ ಮುಂದೆ ವ್ಯಕ್ತಪಡಿಸಿದ್ದರು. ಈಗ ಪ್ರಧಾನಿ ಮೋದಿಯವರನ್ನೂ ಭೇಟಿಯಾಗಿ, ಮೈತ್ರಿಯ ನೆಪದಲ್ಲಿ ಮಂಡ್ಯ ಕ್ಷೇತ್ರವನ್ನ ಬಿಟ್ಟುಕೊಡದಿರಲು ಮನವಿ ಮಾಡಿಕೊಂಡಿದ್ದಾರೆ.

Related Articles

Back to top button