ಬೆಂಗಳೂರು ಉತ್ತರ: ಶೋಭಾ ವಿರುದ್ಧ ಕಾಂಗ್ರೆಸ್ನಿಂದ ಪ್ರಬಲ ಪೈಪೋಟಿಗೆ ಶಾಸಕ ಪ್ರಿಯಾಕೃಷ್ಣ ಕಣಕ್ಕೆ..?

Views: 105
ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಹೇಗಾದರು ಮಾಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಭಾರಿ ಪ್ಲಾನ್ ನಡೆಯುತ್ತಿದೆ. ಬಿಜೆಪಿಯಿಂದ ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರು ಉತ್ತರದಿಂದ ಕಣಕ್ಕಿಳಿಸಿದ್ದಾರೆ. ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್ನಿಂದ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿಯನ್ನು ನಿಲ್ಲಿಸಲು ಚಿಂತನೆ ನಡೆಸುತ್ತಿದ್ದಾರೆ.
ಗೋವಿಂದರಾಜನಗರ ಶಾಸಕ ಪ್ರಿಯಾ ಕೃಷ್ಣ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಇನ್ನೂ ಕಾಂಗ್ರೆಸ್ ಹಲವು ನಾಯಕರ ತಂಡವೊಂದು ಪ್ರಿಯಾ ಕೃಷ್ಣ ಅವರನ್ನು ಭೇಟಿ ಮಾಡಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಮನವೊಲಿಸುವ ಕೆಲಸ ಮಾಡಿದೆಯಂತೆ. ಇವರ ಜೊತೆಗೆ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಅವರಿಂದಲೂ ಮನವೊಲಿಸುವ ಯತ್ನ ನಡೆದಿದೆ.
ಇದಲ್ಲದೇ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯನವರು ಕೃಷ್ಣಪ್ಪ ಜೊತೆ ಕರೆ ಮಾಡಿ ಈ ಬಗ್ಗೆ ಚರ್ಚೆ ಮಾಡಿದ್ದಾರಂತೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಪ್ರಿಯಾ ಕೃಷ್ಣ ಸ್ಪರ್ಧಿಸಿದರೆ ಪ್ರಬಲ ಪೈಪೋಟಿ ನೀಡುವ ಲೆಕ್ಕಾಚಾರ ಇದೆಯಂತೆ. ಆದರೆ ತಂದೆ ಲೇಔಟ್ ಕೃಷ್ಣಪ್ಪ ಮತ್ತು ಸಚಿವ ಕೃಷ್ಣ ಬೈರೇಗೌಡ ಒತ್ತಾಯಕ್ಕೆ ಮಣಿದು ಪ್ರಿಯಾ ಕೃಷ್ಣ ಸ್ಪರ್ಧಿಸೋದು ಬಹುತೇಕ ಖಚಿತವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಯಲ್ಲಿ ಬಿಜೆಪಿ 5 ಮತ್ತು ಕಾಂಗ್ರೆಸ್ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.ಇನ್ನೂ ಶೋಭಾ ಕರಂದ್ಲಾಜೆ ಹಾಗೂ ಪ್ರಿಯಾ ಕೃಷ್ಣ ಇಬ್ಬರು ಒಕ್ಕಲಿಗ ಸಮುದಾಯದವರಾಗಿದ್ದು, ಕಣ ರಂಗೇರುವ ಸಾಧ್ಯತೆ ಇದೆ.