ಬಿಜೆಪಿ ವಿರುದ್ಧ ಮತ್ತೆ ಸಿಡಿದು, ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಕಣಕ್ಕೆ ಅರುಣ್ ಪುತ್ತಿಲ ನಿರ್ಧಾರ!

Views: 82
ಮಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಪುತ್ತೂರು ಕ್ಷೇತ್ರದಿಂದ ಬಂಡುಕೋರನಾಗಿ ಸ್ಪರ್ಧಿಸಿ ಬಿಜೆಪಿ ಸೋಲಿಗೆ ಕಾರಣರಾಗಿದ್ದ ಹಿಂದೂ ಸಂಘಟನೆ ನಾಯಕ ಅರುಣ್ ಕುಮಾರ್ ಪುತ್ತಿಲ ಮತ್ತೆ ಸಿಡಿದೆದ್ದಿದ್ದಾರೆ ಇತ್ತೀಚೆಗೆ ಬಿಜೆಪಿ ನಾಯಕರ ಜತೆಗಿನ ಮಾತುಕತೆಯಲ್ಲಿ ಭಿನ್ನಮತ ಇತ್ಯರ್ಥವಾಗಿದೆ ಎಂದು ಹೇಳಲಾಗಿತ್ತು. ಆದರೆ, ಬಿಜೆಪಿ ನಾಯಕರು ನೀಡಿದ ಭರವಸೆಗಳು ಈಡೇರಿಲ್ಲ ಎಂಬ ಕಾರಣಕ್ಕೆ ಅವರು ಸಿಡಿದು ನಿಂತಿದ್ದು, ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರನಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ಗುರುವಾರ ಪುತ್ತೂರಿನಲ್ಲಿ ಪುತ್ತಿಲ ಪರಿವಾರದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರ ಸ್ಪರ್ಧೆಯನ್ನು ಘೋಷಿಸಲಾಯಿತು. ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಪರಿವಾರದ ನಾಯಕರು ಪ್ರಕಟಿಸಿದರು.
ಪುತ್ತೂರು ಕ್ಷೇತ್ರದ ಚುನಾವಣೆ ಬಳಿಕ ಅರುಣ್ ಕುಮಾರ್ ಪುತ್ತಿಲ ಅವರು ಮುಂದೆ ಲೋಕಸಭಾ ಕಣಕ್ಕೂ ಪ್ರವೇಶಿಸಿ ಬಿಜೆಪಿಗೆ ಮುಜುಗರ ಉಂಟು ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಅದರ ನಡುವೆ ಹಿರಿಯ ನಾಯಕರ ನಡುವೆ ಮಾತುಕತೆ ನಡೆದು ಕೆಲವೊಂದು ಷರತ್ತುಗಳೊಂದಿಗೆ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗಲು ಪರಿವಾರ ನಿರ್ಧಾರ ಮಾಡಿತ್ತು. ಸ್ವತಃ ಅರುಣ್ ಕುಮಾರ್ ಪುತ್ತಿಲ ಅವರೇ ಇದನ್ನು ಪ್ರಕಟಿಸಿದ್ದರು.
ಬಿಜೆಪಿಯ ಪುತ್ತೂರು ಜಿಲ್ಲಾ ಪದಾಧಿಕಾರಿಗಳ ಆಯ್ಕೆಯಲ್ಲಿ ಪುತ್ತಿಲ ಪರಿವಾರದದವರಿಗೆ ಅವಕಾಶ ನೀಡಬೇಕು ಎನ್ನುವ ಪ್ರಮುಖ ಬೇಡಿಕೆ ಅವರದಾಗಿತ್ತು. ಇದೂ ಸೇರಿದಂತೆ ಕೆಲವು ಷರತ್ತುಗಳಿಗೆ ಬಿಜೆಪಿ ಒಪ್ಪಿತ್ತು ಎನ್ನಲಾಗುತ್ತಿದೆ. ಇದಾದ ಬಳಿಕ ಪುತ್ತಿಲ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರನ್ನು ಭೇಟಿಯಾಗಿದ್ದರು. ಆಗಲೂ ಕೆಲವೊಂದು ಬೇಡಿಕೆ, ಷರತ್ತುಗಳನ್ನು ಮುಂದಿಟ್ಟಿದ್ದರು. ಆದರೆ, ಸಾಮಾನ್ಯ ಕಾರ್ಯಕರ್ತರಾಗಿ ಬಿಜೆಪಿ ಸೇರ್ಪಡೆಗೆ ಸೂಚಿಸಲಾಗಿತ್ತು ಎನ್ನಲಾಗಿದೆ. ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಲು ಪುತ್ತಿಲ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.