ಬಸ್ಸಿನಲ್ಲಿ ಅತ್ಯಾಚಾರವೆಸಗಿ ನಾಪತ್ತೆಯಾಗಿದ್ದ ಆರೋಪಿ ಕೊನೆಗೂ ಸೆರೆ

Views: 175
ಕನ್ನಡ ಕರಾವಳಿ ಸುದ್ದಿ:ನಿಂತಿದ್ದ ಬಸ್‌ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಕಾಮುಕನನ್ನು ದತ್ತಾತ್ರೇಯ ಗಾಡೆ ಎಂದು ಗುರುತಿಸಲಾಗಿದೆ.
ಈ ನೀಚಕೃತ್ಯವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು 7 ತಾಸುಗಳಲ್ಲಿ ಬಲೆಗೆ ಕೆಡವಿದ್ದಾರೆ.
ಪುಣೆಯ ಸ್ವಾರ್‌ಗೇಟ್ ಬಸ್ ಡಿಪೋದಲ್ಲಿ ನಿಂತಿದ್ದ ಬಸ್‌ನಲ್ಲಿ ನಿನ್ನೆ ಮಧ್ಯರಾತ್ರಿ ಈ ನೀಚ ಕೃತ್ಯವೆಸಗಿದ್ದ ಹಿನ್ನೆಲೆಯಲ್ಲಿ ಗಾಡೆಯನ್ನು ಬಂಧಿಸಲಾಗಿದ್ದು, ಸದ್ಯ ಆತನನ್ನು ಲಷ್ಕರ್ ಪೊಲೀಸ್ ಠಾಣೆಯಲ್ಲಿರಿಸಲಾಗಿದೆ.
ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು, ಬಂಧನಕ್ಕೊಳಗಾಗಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ.
ಪುಣೆ ಜಿಲ್ಲೆಯ ಶಿರೂರು ತಹಸಿಲ್‌ನ ಗುಣತ್ ಗ್ರಾಮದ ಸಮೀಪದಲ್ಲಿ ಪುಣೆ ಪೊಲೀಸರು ಹಾಗೂ ಸಿಐಡಿ ಅಪರಾಧ ವಿಭಾಗದ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಗಾಡೆಯನ್ನು ಬಂಧಿಸುವಲ್ಲಿ ಸಫಲವಾಗಿದೆ. ಈತನ ಪತ್ತೆಗಾಗಿ 500 ಜನ ಪೊಲೀಸರು, ಡ್ರೋಣ್‌ಗಳು ಮತ್ತು ಶ್ವಾನದಳವನ್ನು ಗುಣತ್ ಗ್ರಾಮ ಮತ್ತು ಚಿಂಚಿಣ್ಣಿ ಅಣೆಕಟ್ಟಿನ ಹಿನ್ನೀರಿನ ಉದ್ದಕ್ಕೂ ನಿಯೋಜಿಸಿದ್ದರು. ಆರೋಪಿಯ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.
ಆರೋಪಿಯನ್ನು ಬಂಧಿಸಲು ಸ್ಥಳೀಯ ಗ್ರಾಮಸ್ಥರು ಪೊಲೀಸರಿಗೆ ನೆರವಾಗಿದ್ದಾರೆ. ಪುಣೆ ಮತ್ತು ಅಹಲ್ಯಾ ನಗರ ಜಿಲ್ಲೆಗಳಲ್ಲಿ ಕಳ್ಳತನ, ದರೋಡೆ ಹಾಗೂ ಸರಗಳ್ಳತನ ಸೇರಿದಂತೆ ಹಲವಾರು ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ. 2019 ರಿಂದ ಜಾಮೀನಿನ ಮೇಲೆ ಹೊರ ಬಂದು ಡಿಪೊದಲ್ಲಿ ನಿಂತಿದ್ದ ಬಸ್‌ನಲ್ಲಿ ಅತ್ಯಾಚಾರವೆಸಗಿದ್ದಾನೆ.
ಈ ಘಟನೆ ಬುಧವಾರ ಬೆಳಗಿನಜಾವ 5.30ರ ಸುಮಾರಿಗೆ ಪುಣೆಯ ಸ್ವಾರ್‌ಗೇಟ್ ಡಿಪೊದಲ್ಲಿ ನಿಂತಿದ್ದ ಬಸ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ ಘಟನೆ ನಡೆದಿತ್ತು.
ಸಂತ್ರಸ್ಥೆ ಪುಣೆಯಿಂದ ಸತಾರ ಜಿಲ್ಲೆಯ ಫಾಲ್‌ತ್ತಾನ್‌ಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದ ವೇಳೆ ಮಹಿಳೆಯ ಬಳಿಗೆ ಬಂದ ವ್ಯಕ್ತಿ ನೀವು ತೆರಳಬೇಕಾದ ಬಸ್ ಮತ್ತೊಂದು ಪ್ಲಾಟ್‌ಫಾಂಗೆ ಬಂದಿದೆ ಎಂದು ಹೇಳಿದ್ದಾನೆ. ನಂತರ ಮಹಿಳೆಯನ್ನು ನಿರ್ಜನ ಸ್ಥಳದಲ್ಲಿ ನಿಲ್ಲಿಸಿದ್ದ ಖಾಲಿ ಬಸ್‌ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುಣೆಯಲ್ಲಿರುವ ಮಹಾರಾಷ್ಟ್ರ ರಾಜ್ಯ ಸಾರಿಗೆ ನಿಗಮದ ಬಸ್ ಡಿಪೊ ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಇಂತಹ ಸ್ಥಳದಲ್ಲಿ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಪ್ರಕರಣದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.