ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ತೀವ್ರತೆ: ಕರಾವಳಿಯಲ್ಲಿ ಜೂನ್ 13 ರಿಂದ 16ರವರೆಗೆ ‘ರೆಡ್ ಅಲರ್ಟ್’

Views: 123
ಕನ್ನಡ ಕರಾವಳಿ ಸುದ್ದಿ: ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ಚಂಡಮಾರುತ ಪರಿಚಲನೆ ಮುಂದುವರಿದಿದೆ. ಪರಿಣಾಮ ಕರ್ನಾಟಕದಾದ್ಯಂತ ಮುಂದಿನ 5 ದಿನ ಸಾಧಾರಣದಿಂದ ಭಾರೀ ಮತ್ತು ಅತೀ ಭಾರೀ ಮಳೆ ಆಗುವ ನಿರೀಕ್ಷೆಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಸಮುದ್ರ ಭಾಗದಲ್ಲಿ ವೈಪರೀತ್ಯ ಗಾಳಿಯ ಎತ್ತರ 3.5 ರಿಂದ 4.5 ಕಿಲೋ ಮೀಟರ್ ಎತ್ತರದಲ್ಲಿದೆ. ಇದರ ಪ್ರಭಾವದಿಂದಾಗಿ ರಾಜ್ಯದ ಮಲೆನಾಡು, ಒಳನಾಡು ಭಾಗಗಳಲ್ಲಿ ಜೋರು ಮಳೆ ಆಗಲಿದೆ. ಆರಂಭದಲ್ಲಿ ಸುರಿದಿದ್ದ ಮುಂಗಾರು ಮಳೆ ಕೊಂಚ ಬಿಡುವ ನೀಡಿತ್ತು. ಇದೀಗ ಮೂರು ದಿನಗಳಿಂದ ರಾಜ್ಯಾದ್ಯಂತ ಎರಡನೇ ಬಾರಿ ಮುಂಗಾರು ಸಕ್ರಿಯವಾಗಿದೆ. ಕರಾವಳಿಯ ಮೂರು ಜಿಲ್ಲೆಗಳು, ದಕ್ಷಿಣ ಹಾಗೂ ಉತ್ತರ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ಆರ್ಭಟ ಕಂಡು ಬರಲಿದೆ. ಈ ವೇಳೆ ಗಾಳಿಯ ವೇಗ ಪ್ರತಿ ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ.
ವಿಜಯಪುರ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚು ಮಳೆ ಆಗಿದೆ. ಮೋಡ ಕವಿದ ವಾತಾವರಣ ಜೊತೆಗೆ ಧಾರಾಕಾರ ಮಳೆ ಆಗಿದೆ. ಮುನ್ಸೂಚನೆ ನೋಡುವುದಾದರೆ, ಜೂನ್ 12-16ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಮೇತ ಮಳೆ ಆಗಲಿದೆ. ಮಳೆ ಜೊತೆಗೆ ಗಾಳಿಯ ವೇಗ ಹೆಚ್ಚಾಗಿರಲಿದೆ ಎಂದಿದ್ದಾರೆ.
ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಜೂನ್ 13, 14, 15 & 16ರವರೆಗೆ ಅತ್ಯಧಿಕ ಭಾರಿ ಅಂದರೆ 200 ಮಿಲಿ ಮೀಟರ್‌ಗೂ ಹೆಚ್ಚು ಮಳೆ ಆಗಲಿದೆ. ಹೀಗಾಗಿ ”ರೆಡ್ ಅಲರ್ಟ್ ನೀಡಲಾಗಿದೆ. ಇದರೊಂದಿಗೆ ಬೆಳಗಾವಿ, ಹಾವೇರಿ, ಧಾರವಾಡಕ್ಕೆ ನಾಳೆ 01 ದಿನ ಹಾಗೂ ಕೊಡಗು ಜಿಲ್ಲೆಗೆ 02 ದಿನ ಹಾಗೂ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಒಟ್ಟು 3 ದಿನ ‘ರೆಡ್ ಅಲರ್ಟ್’ ಘೋಷಿಸಲಾಗಿದೆ ಎಂದು ವರದಿ ತಿಳಿಸಿದೆ.
ರೆಡ್ ಅಲರ್ಟ್ ಜಿಲ್ಲೆಗಳು ಮತ್ತು ಆ ದಿನಗಳನ್ನು ಹೊರತುಪಡಿಸಿದರೆ ಉಳಿದ ದಿನ (ಜೂನ್ 16ರವರೆಗೆ) ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ರಾಯಚೂರು, ದಾವಣಗೆರೆ, ಚಿಕ್ಕಮಗಳೂರು, ಕೊಡಗು, ಮೈಸೂರು, ವಿಜಯಪುರ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಎರಡು ದಿನ ‘ಆರೆಂಜ್ ಅಲರ್ಟ್’ ಅಲರ್ಟ್ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಬಿಟ್ಟು ಬಿಡದೇ ಗರಿಷ್ಠ 200 ಮಿಲಿ ಮೀಟರ್‌ವರೆಗೆ ಧಾರಾಕಾರ ಮಳೆ ಆಗಲಿದೆ.
ಮಂಡ್ಯ, ರಾಮನಗರ, ತುಮಕೂರು, ವಿಜಯನಗರ, ಕೋಲಾರ, ಹಾಸನ, ಚಿತ್ರದುರ್ಗ, ಬೆಂಗಳೂರು, ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಗರಿಷ್ಠ 110 ಮಿಲಿ ಮೀಟರ್ ವರೆಗೆ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಈಗಾಗಲೇ ಜೋರು ಮಳೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಅಗಲಿದೆ. ಸಾಮಾನ್ಯವಾಗಿ ಮಬ್ಬು ವಾತಾವರಣ ಕವಿಯಲಿದೆ. ಗಾಳಿ ಪ್ರಮಾಣ 40-50 ಕಿಲೋ ಮೀಟರ್‌ವರೆಗೆ ಆಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.