ಪ್ರಸಾದ ಸೇವಿಸಿದ 300ಕ್ಕೂ ಅಧಿಕ ಜನರಿಗೆ ಹೊಟ್ಟೆ ನೋವು, ವಾಕರಿಕೆ, ವಾಂತಿ: ಆಸ್ಪತ್ರೆಯಲ್ಲಿ ಬೆಡ್ ಇಲ್ಲದೆ ರಸ್ತೆಯಲ್ಲೇ ಚಿಕಿತ್ಸೆ

Views: 71
ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಆಹಾರ ಸೇವಿಸಿದ್ದ ನಂತರ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸುಮಾರು 300ಕ್ಕೂ ಅಧಿಕ ಜನರು ಅಸ್ವಸ್ಥರಾಗಿದ್ದು, ಆಸ್ಪತ್ರೆಯಲ್ಲಿ ಜಾಗವಿಲ್ಲದೆ ರಸ್ತೆಯಲ್ಲೇ ಚಿಕಿತ್ಸೆ ನೀಡಲಾಗಿದೆ.
ಬುಲ್ಧಾನ ಜಿಲ್ಲೆಯ ಲೋನಾರ್‌ನ ಸೋಮ್ತಾನ ಗ್ರಾಮದಲ್ಲಿ ಒಂದು ವಾರದ ಧಾರ್ಮಿಕ ಕಾರ್ಯಕ್ರಮವಾದ ‘ಹರಿಣಂ ಸಪ್ತಾಹ’ದ ಕೊನೆಯ ದಿನದಂದು ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಜಿಲ್ಲಾಧಿಕಾರಿ ಕಿರಣ್ ಪಾಟೀಲ್ ತಿಳಿಸಿದ್ದಾರೆ
ಒಂದೇ ಸಮನೆ 300ಕ್ಕೂ ಅಧಿಕ ಜನರು ಅಸ್ವಸ್ಥರಾಗಿದ್ದರಿಂದ ಸ್ಥಳೀಯ ಆಸ್ಪತ್ರೆಯಲ್ಲಿ ಬೆಡ್ ಕೊರತೆ ಉಂಟಾಗಿದೆ. ಹಾಗಾಗಿ, ಆಸ್ಪತ್ರೆಯ ಹೊರಭಾಗದ ರಸ್ತೆಯಲ್ಲೇ ಹೆಚ್ಚಿನವರಿಗೆ ಚಿಕಿತ್ಸೆ ನೀಡಲಾಗಿದೆ. ಮರಕ್ಕೆ ಹಗ್ಗ ಕಟ್ಟಿ ಗ್ಲೂಕೋಸ್ ಬಾಟಲಿಗಳನ್ನು ತೂಗು ಹಾಕಿದ್ದ ವಿಡಿಯೋ ವೈರಲ್ ಆಗಿದೆ.
ಮಂಗಳವಾರ ರಾತ್ರಿ 10 ಗಂಟೆಯ ಸುಮಾರಿಗೆ ಸೋಮ್ತಾನ ಮತ್ತು ಖಾಪರಖೇಡ್ ಗ್ರಾಮದ ಭಕ್ತರು ದೇವಸ್ಥಾನಕ್ಕೆ ಬಂದು ಪ್ರಸಾದ ಸ್ವೀಕರಿಸಿದ್ದಾರೆ. ಪ್ರಸಾದ ಸೇವಿಸಿದ ನಂತರ ಬಹುತೇಕರಲ್ಲಿ ಹೊಟ್ಟೆ ನೋವು, ವಾಕರಿಕೆ, ವಾಂತಿ ಕಾಣಿಸಿಕೊಂಡಿದೆ.
ಅಸ್ವಸ್ಥರಾದ ಜನರನ್ನು ತಕ್ಷಣ ಬೀಬಿ ಗ್ರಾಮದ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅಲ್ಲಿ ಬೆಡ್‌ಗಳ ಕೊರತೆಯಿಂದಾಗಿ ಬಹುತೇಕ ರೋಗಿಗಳು ಆಸ್ಪತ್ರೆಯ ಹೊರಭಾಗದ ರಸ್ತೆಯಲ್ಲೇ ಚಿಕಿತ್ಸೆ ಪಡೆಯಬೇಕಾಯಿತು.
ನಿನ್ನೆ ಸೋಮ್ತಾನಾ ಗ್ರಾಮದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದ ಆರನೇ ದಿನವಾಗಿತ್ತು. 400ರಿಂದ 500 ಜನರಿಗೆ ‘ಏಕಾದಶಿ’ (ಹನ್ನೊಂದನೇ ದಿನ) ಎಂದು ‘ಪ್ರಸಾದ’ ವಿತರಿಸಲಾಗಿತ್ತು.
ಎಲ್ಲ ರೋಗಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಬಹುತೇಕರು ಡಿಸ್ಚಾರ್ಜ್ ಆಗಿದ್ದಾರೆ. ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದರೆ ತಕ್ಷಣ ಸ್ಪಂದಿಸಲು ಆಂಬ್ಯುಲೆನ್ಸ್ ಮತ್ತು ಇತರ ಅಗತ್ಯ ಉಪಕರಣಗಳೊಂದಿಗೆ ವೈದ್ಯರ ತಂಡವನ್ನು ನಿಯೋಜಿಸಲಾಗಿದೆ. ‘ಪ್ರಸಾದ’ದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಘಟನೆ ಕುರಿತು ತನಿಖೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಪಾಟೀಲ್ ತಿಳಿಸಿದ್ದಾರೆ.