ಪ್ರಜ್ವಲ್ ರೇವಣ್ಣ, ನಿಖಿಲ್ ಜೊತೆ ಜೆಡಿಎಸ್, ಬಿಜೆಪಿ ಶಾಲು ಧರಿಸಿದ ಬಿ.ವೈ ವಿಜಯೇಂದ್ರ ಸಮನ್ವಯತೆ

Views: 23
ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ, ಜೆಡಿಎಸ್ ನಾಯಕರು ಒಗ್ಗಟ್ಟಿನ ಪ್ರದರ್ಶನ ಮಾಡಿದ್ದಾರೆ. ಎರಡು ಪಕ್ಷದ ಪ್ರಮುಖ ನಾಯಕರು ಇಂದು ಸಮನ್ವಯ ಸಭೆ ನಡೆಸಿದ್ದು, ಮೈತ್ರಿ ಪಕ್ಷದಲ್ಲಿ ಎಷ್ಟು ಹೊಂದಾಣಿಕೆ ಇದೆ ಅನ್ನೋ ಸಂದೇಶ ಸಾರಿದ್ದಾರೆ.
ಬಿಜೆಪಿ, ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಹೆಚ್.ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.
ಸಮನ್ವಯ ಸಭೆಯಲ್ಲಿ ಲೋಕಸಭಾ ಚುನಾವಣೆಯನ್ನು ಒಟ್ಟಿಗೆ ಎದುರಿಸೋ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ. ಪ್ರಮುಖವಾಗಿ ಬಿಜೆಪಿ, ಜೆಡಿಎಸ್ ಯುವ ನಾಯಕರು ಒಟ್ಟಿಗೆ ಕೈ ಕುಲುಕುತ್ತಾ ಕಾಲ ಕಳೆದಿದ್ದು ವಿಶೇಷವಾಗಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಜೊತೆ ಸಂಸದ ಪ್ರಜ್ವಲ್ ರೇವಣ್ಣ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಒಟ್ಟಿಗೆ ಫೋಟೋಗೆ ಪೋಸ್ ಕೊಟ್ಟರು. ವಿಜಯೇಂದ್ರ ಅವರ ಜೊತೆ ಫೋಟೋಗೆ ಪೋಸ್ ಕೊಡುವಾಗ ಜೆಡಿಎಸ್ ಪಕ್ಷದ ಶಾಲಿನ ಜೊತೆಗೆ ತ್ರಿಮೂರ್ತಿಗಳು ಬಿಜೆಪಿ ಪಕ್ಷದ ಶಾಲನ್ನು ಧರಿಸಿದ್ದರು.
ವಿಜಯೇಂದ್ರ ಅವರ ಜೊತೆ ನಿಂತಿದ್ದ ಪ್ರಜ್ವಲ್ ರೇವಣ್ಣ ಅವರಿಗೆ ಬೆಂಬಲಿಗರು ಬಿಜೆಪಿ ಪಕ್ಷದ ಶಾಲು ಹಾಕಲು ಮುಂದಾದರು. ಆಗ ನಿಖಿಲ್ ಕುಮಾರಸ್ವಾಮಿ ಅವರು ಸಹ ಒಟ್ಟಿಗೆ ಸೇರಿದ್ದೇವೆ ಬಿಜೆಪಿ ಪಕ್ಷದ ಶಾಲು ಕೊಡಿ ಎನ್ನುತ್ತಾ ಎರಡೂ ಪಕ್ಷದ ಶಾಲು ಹಾಕಿಕೊಂಡರು. ಬಿ.ವೈ ವಿಜಯೇಂದ್ರ ಅವರಿಗೂ ಜೆಡಿಎಸ್ ಪಕ್ಷದ ಶಾಲು ನೀಡುವ ಮೂಲಕ ಎರಡೂ ಪಕ್ಷದ ನಾಯಕರು ತಮ್ಮಲ್ಲಿ ಎಷ್ಟು ಸಮನ್ವಯತೆ ಇದೆ ಅನ್ನೋದನ್ನು ಸಾರಿದರು.