ರಾಜಕೀಯ

ನಾನು ಆರಂಭಿಸಿದ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಹಾಲಿ ಶಾಸಕರಿಂದ ಅಡ್ಡಗಾಲು: ಮಾಜಿ ಶಾಸಕ ರಘುಪತಿ ಭಟ್ ಆರೋಪ

Views: 95

ಕನ್ನಡ ಕರಾವಳಿ ಸುದ್ದಿ: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ-ಮಾಜಿ ಶಾಸಕರ ಭಿನ್ನಮತ ಜೋರಾಗಿದೆ. ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಮಾಜಿ ಬಿಜೆಪಿ ಶಾಸಕ ರಘುಪತಿ ಭಟ್ ಅಸಮಾಧಾನ ವ್ಯಕ್ತಪಡಿಸಿದರು.

ನಾನು ಆರಂಭಿಸಿದ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಹಾಲಿ ಶಾಸಕರಿಂದ ಅಡ್ಡಗಾಲು ಹಾಕಿದ್ದಾರೆ. ನನ್ನ ಮೇಲೆ ಯಾಕೆ ವೈಯಕ್ತಿಕ ದ್ವೇಷ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ಹಾಲಿ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಆರೋಪಿಸಿದರು.

ಈಗಿನ ಶಾಸಕರ ಬಗ್ಗೆ ನೂರಕ್ಕೆ ನೂರು ಬೇಸರ ಇದೆ. ನಾನು ವಿಧಾನಪರಿಷತ್ ಚುನಾವಣೆಯಲ್ಲಿ ಸ್ವತಂತ್ರವಾಗಿ ನಿಲ್ಲಲು ಕೂಡ ಅವರೇ ಕಾರಣ. ಟ್ರಾಫಿಕ್ ಜಂಕ್ಷನ್‌ ನನ್ನ ಯೋಜನೆ ಎನ್ನುವ ಕಾರಣಕ್ಕೆ ನಿಲ್ಲಿಸಿದ್ದಾರೆ. ನಾನು ನಗರದ ಸಮಸ್ಯೆಯನ್ನು ಅವರಿಗೆ ಕನ್ವಿನ್ಸ್ ಮಾಡಿದರೂ ಕೇಳಲಿಲ್ಲ. ಕೃತಜ್ಞತೆ ಇರುವ ಯಾವುದೇ ವ್ಯಕ್ತಿ ಹೀಗೆ ಮಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಯಶ್ ಪಾಲ್ ಸುವರ್ಣ ಬೆಳವಣಿಗೆಯಲ್ಲಿ ನನ್ನ ಪಾತ್ರ ಏನು ಅನ್ನೋದು ಉಡುಪಿ ಜನತೆಗೆ ಗೊತ್ತಿದೆ. 2004ರಲ್ಲಿ ನಾನು ಚುನಾವಣೆ ನಿಂತಾಗ ನನ್ನ ಎದುರು ಪ್ರಚಾರ ಮಾಡಿದ್ದರು. ಬೆತ್ತಲೆ ಪ್ರಕರಣ ಆದಾಗ ನಾನು ಬೆಂಬಲ ಕೊಟ್ಟು ಯಶ್ ಪಾಲ್ ಜೊತೆಗೆ ನಿಂತೆ. ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ನಗರಸಭೆ ನಾಮನಿರ್ದೇಶನ ಸದಸ್ಯ ಮಾಡಿದೆ. ಎರಡು ಭಾರಿ ನಗರಸಭಾ ಸದಸ್ಯರನ್ನಾಗಿ ಮಾಡಿದೆ. ಮೀನುಗಾರಿಕಾ ಫೆಡರೇಷನ್‌ಗೂ ನಾಮನಿರ್ದೇಶನ ಮಾಡಿದೆ, ನಂತರ ಅಧ್ಯಕ್ಷರಾದರು ಎಂದು ತಿಳಿಸಿದರು.

ನಾನು ಉಡುಪಿಯಲ್ಲಿ ಇನ್ನೊಂದು ಬಾರಿ ವಿಧಾನಸಭೆಗೆ ಸ್ಪರ್ಧಿಸಬೇಕು ಎಂದು ನಿರ್ಧರಿಸಿದ್ದೇನೆ. ಜನತೆ ನನ್ನನ್ನು ಈವರೆಗೆ ಸೋಲಿಸಿಲ್ಲ. ಉಡುಪಿ ವಿಧಾನಸಭಾ ಕ್ಷೇತ್ರದಿಂದ ನಾನು ಮೂರು ಬಾರಿಗೆ ಗೆದ್ದಿದ್ದೇನೆ. ಇನ್ನೂ ಮೂರುವರೆ ವರ್ಷ ಇದೆ. ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂದು ಮುಂದೆ ನಿರ್ಧರಿಸುತ್ತೇನೆಂದು ರಘುಪತಿ ಭಟ್ ಹೇಳಿದರು.

ಬಿಜೆಪಿ ಸೇರ್ಪಡೆ ಬಗ್ಗೆ ಉತ್ತರಿಸಿದ ಅವರು, ಪಕ್ಷ ಕರೆದರೆ ನಾನು ಬಿಜೆಪಿಗೆ ಸೇರುತ್ತೇನೆ. ಸದ್ಯದ ಬೆಳವಣಿಗೆಗಳನ್ನು ನೋಡುತ್ತಿರುವಾಗ ಬಿಜೆಪಿಗೆ ನನ್ನ ಅವಶ್ಯಕತೆ ಇಲ್ಲ ಅಂತ ಅನ್ನಿಸಿರಬೇಕು. ಹಾಗಾಗಿ ಬಿಜೆಪಿ ನನ್ನನ್ನು ಆಹ್ವಾನಿಸುತ್ತಿಲ್ಲ ಎಂದರು.

ಕಾಂಗ್ರೆಸ್ ಸೇರ್ಪಡೆ ಮತ್ತು ಇತರ ಯಾವುದೇ ಚರ್ಚೆ ನಡೆದಿಲ್ಲ. ಕಾಂಗ್ರೆಸ್‌ನ ಯಾರೂ ನನ್ನನ್ನು ಭೇಟಿ ಆಗಿಲ್ಲ.ನಾನೂ ಯಾರನ್ನೂ ಭೇಟಿ ಆಗಿಲ್ಲ ಎಂದರು.

ಉಡುಪಿಯಲ್ಲಿ ನಾನು ಮೂರು ಬಾರಿ ಶಾಸಕನಾಗಿದ್ದವನು. ಬಿಜೆಪಿ ನನ್ನನ್ನು ಯಾವ ರೀತಿ ನೋಡಿಕೊಳ್ಳುತ್ತಿದೆ ಎಂದು ನೆನೆದರೆ ಬೇಸರವಾಗುತ್ತದೆ. ಬಿಜೆಪಿಯ ಇತರ ನಾಯಕರು ಕೂಡ ಈ ಬಗ್ಗೆ ಯೋಚನೆ ಮಾಡಿಲ್ಲ. ನನ್ನ ಬೆಳವಣಿಗೆಯಲ್ಲಿ ಬಿಜೆಪಿಯ ಪಾತ್ರ ಇದೆ. ಹಾಗಾಗಿ ಆ ತತ್ವದಲ್ಲಿ ಇದ್ದೇನೆ. ಬಿಜೆಪಿ ಬೆಳವಣಿಗೆಯಲ್ಲಿ ನನ್ನ ಪಾತ್ರ ಇಲ್ವಾ? 1999 ರಿಂದ 23 ವರೆಗೆ ನಾನು ಅಳಿಲ ಸೇವೆ ಮಾಡಿಲ್ವಾ? ನನ್ನ ಬಗ್ಗೆ ಅವಹೇಳನ ಶಬ್ದಗಳಲ್ಲಿ ಮಾತನಾಡುತ್ತಾರೆ. ಇದು ಸಜ್ಜನ ಎಂಎಲ್ಎಗಳ ಲಕ್ಷಣ ಅಲ್ಲ. ಅವರ ವೈಯಕ್ತಿಕ ಬೆಳವಣಿಗೆಯಲ್ಲಿ ನನ್ನ ಕೊಡುಗೆ ಇದೆ. ಸ್ವಲ್ಪವಾದರೂ ಕೃತಜ್ಞತೆ ಇರಬೇಕು.ನನ್ನ ವೈಯಕ್ತಿಕ ಸೊಸೈಟಿ ವಿಚಾರ ಅಸೆಂಬ್ಲಿಯಲ್ಲಿ ಮಾತನಾಡಿದರು. ಉಡುಪಿಯ ರಾಜಕಾರಣದಲ್ಲಿ ಇಂತಹ ರಾಜಕಾರಣಿ ನೋಡಿಲ್ಲ ಎಂದರು.

 

 

Related Articles

Back to top button