“ನಮ್ಮೂರು ನಮ್ಮ ಕೆರೆ” ಯೋಜನೆಯಡಿ ಕ್ಯಾಸನ ಮಕ್ಕಿ ಕೆರೆ ಪುನಶ್ಚೇತನ

Views: 46
ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕುಂದಾಪುರ ತಾಲೂಕು ಇದರ ಆರ್ಥಿಕ ಸಹಕಾರದೊಂದಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಹೊಂಬಾಡಿ -ಮಂಡಾಡಿ ಗ್ರಾಮ ಪಂಚಾಯಿತಿ ಮತ್ತು ಕ್ಯಾಸನ್ ಮಕ್ಕಿ ಕೆರೆ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರ ಸಹಭಾಗಿತ್ವದಲ್ಲಿ “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದ ಅಡಿಯಲ್ಲಿ ಪುನಶ್ಚೇತನಗೊಳ್ಳುತ್ತಿರುವ ಕ್ಯಾಸನ್ ಮಕ್ಕಿ ಕೆರೆ ಹೂಳೆತ್ತುವ ಕಾಮಗಾರಿಯ ಭೂಮಿ ಪೂಜೆ ಸಮಾರಂಭ ಶನಿವಾರ ಜರುಗಿತು.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಕ್ಯಾಸನ್ ಮಕ್ಕಿ ಕೆರೆ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ, ಇಂದು ಈ ಕೆರೆ ಹೂಳೆತ್ತಿಸಿದಲ್ಲಿ ನೀರಿನ ಸಂಗ್ರಹಣ ಸಾಮರ್ಥ್ಯ ಹೆಚ್ಚಾಗಲಿದೆ. ಜಾನುವಾರುಗಳಿಗೆ ಕುಡಿಯುವ ನೀರು ದೊರಕಲಿದೆ ಮತ್ತು ಸುತ್ತ ಮುತ್ತಲಿನ ಬೋರ್ವೆಲ್ ಗಳ ಅಂತರ್ಜಲ ಮಟ್ಟದ ಪ್ರಮಾಣ ಹೆಚ್ಚುವುದರ ಜೊತೆಗೆ ಕೃಷಿಗೆ ಉತ್ತಮ ಯೋಗ್ಯ ಮಣ್ಣು ದೊರೆಯಲಿದೆ ಎಂದು ವಿವರಿಸಿ, ಇಂದು ಗ್ರಾಮಾಭಿವೃದ್ಧಿ ಯೋಜನೆಯ ಇಂತಹ ಹಲವಾರು ಕಾರ್ಯಕ್ರಮಗಳು ಸರಕಾರಕ್ಕೆ ಮಾದರಿಯಾಗಿವೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಯೋಜನಾ ಕಛೇರಿಯ ಹಿರಿಯ ಯೋಜನಾಧಿಕಾರಿ ನಾರಾಯಣ ಪಾಲನ್, ಕೆರೆಕಟ್ಟೆಗಳು ಹಳ್ಳಿಗಳ ಜೀವನಾಡಿ, ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಈಗಾಗಲೇ ರಾಜ್ಯದಲ್ಲಿ 689 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಇಂದು ಈ ಗ್ರಾಮದ ಕ್ಯಾಸನ್ ಮಕ್ಕಿ ಕೆರೆಯನ್ನು 2024-25 ನೇ ಸಾಲಿನಲ್ಲಿ ಪುನಶ್ಚೇತನಗೊಳಿಸಲು ಆಯ್ಕೆಯಾಗಿದೆ. ಪ್ರಕೃತಿದತ್ತವಾದ ನೀರು, ಗಾಳಿ, ಮಣ್ಣನ್ನು ಇಂದು ನಾವು ಕಲುಷಿತ ಮಾಡುತ್ತಿದ್ದೇವೆ. ಹಿರಿಯರು ನೀಡಿದ ಕೆರೆಕಟ್ಟೆಗಳನ್ನು ಒತ್ತುವರಿ ಮಾಡದೇ ನಾವು ಉಳಿಸಬೇಕಾಗಿದೆ. ನಗರೀಕರಣದಿಂದ ಇಂದು ಅದೆಷ್ಟೋ ಕೆರೆಗಳು ಮಾಯವಾಗುತ್ತಿವೆ. ಮಳೆ ನೀರನ್ನು ಸಂಗ್ರಹಣೆ ಮಾಡಲು ಕೆರೆಗಳ ಅವಶ್ಯಕತೆ ಇದ್ದು ಜಾನುವಾರುಗಳು ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ಮೂಲ ಸೆಲೆ ಕೆರೆಯಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿದ್ಕಲ್ ಕಟ್ಟೆ ವಲಯ ಅಧ್ಯಕ್ಷ ರಮೇಶ್ ಪೂಜಾರಿ, ಕೆರೆ ಅಭಿವೃದ್ಧಿ ಸಮಿತಿಯ ಎಲ್ಲಾ ಸದಸ್ಯರು, ವಲಯದ ಮೇಲ್ವಿಚಾರಕರು, ತಾಲೋಕು ಕೃಷಿ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ಪ್ರಗತಿಬಂದು ಸ್ವ ಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.