ಇತರೆ

‘ನನ್ನ ಸಿಂಧೂರವನ್ನು ನನಗೆ ಮರಳಿ ಕೊಡಿ’  ಸರ್ಕಾರಕ್ಕೆ ಮೊರೆಯಿಟ್ಟ ಯೋಧನ ಪತ್ನಿ

Views: 96

ಕನ್ನಡ ಕರಾವಳಿ ಸುದ್ದಿ:‘ಆಪರೇಷನ್ ಸಿಂಧೂರ’ದ ಚರ್ಚೆಯ ನಡುವೆ ಕಳೆದ 20 ದಿನಗಳ ಹಿಂದೆ ಪಾಕಿಸ್ತಾನ ಸೇನೆ ಸೆರೆಹಿಡಿದಿದೆ ಎನ್ನಲಾದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧ ಪೂರ್ಣಂ ಸಾಹು ಅವರ ಕುಟುಂಬ ತಮ್ಮ ಮನೆ ಮಗನನ್ನು ಮರಳಿ ಕರೆ ತರುವಂತೆ ಕಣ್ಣೀರು ಹಾಕಿದ್ದಾರೆ.

ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾದ ಬಳಿಕ, ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಸಂಪೂರ್ಣ ಹದೆಗೆಟ್ಟಿದೆ. ಆದರೂ, ಯೋಧ ಮರಳಿ ಬರುವ ಭರವಸೆಯನ್ನು ಪಶ್ಚಿಮ ಬಂಗಾಳದ ರಿಶ್ರಾದಲ್ಲಿರುವ ಅವರ ಕುಟುಂಬ ವ್ಯಕ್ತಪಡಿಸಿದೆ.

ಫಿರೋಝ್‌ಪುರದ ಬಿಎಸ್‌ಎಫ್‌ನ 24 ನೇ ಬೆಟಾಲಿಯನ್‌ನ ಯೋಧ ಪೂರ್ಣಂ ಸಾಹು ಅವರನ್ನು, ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ 26 ಭಾರತೀಯ ಪ್ರವಾಸಿಗರನ್ನು ಹತ್ಯೆಗೈದ ಒಂದು ದಿನದ ನಂತರ, ಅಂದರೆ ಏಪ್ರಿಲ್ 23ರಂದು ಭಾರತ-ಪಾಕ್ ಗಡಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ಅಂತಾರಾಷ್ಟ್ರೀಯ ಗಡಿಯಲ್ಲಿ ಸ್ಥಳೀಯ ರೈತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಲ್ಲಿ ಸಹಾಯ ಮಾಡುವಾಗ ಸಾಹು ಅವರು ತಪ್ಪಿ ಗಡಿ ದಾಟಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಪಾಕಿಸ್ತಾನಿ ಪಡೆಗಳು ಸಾಹು ಅವರನ್ನು ಬಂಧಿಸಿ, ಅವರ ಕಣ್ಣಿಗೆ ಕಪ್ಪು ಪಟ್ಟಿ ಕರೆದೊಯ್ಯುವ ಫೋಟೋ ಬಿಡುಗಡೆ ಮಾಡಿದೆ.

ಯೋಧ ಸಾಹು ಬಂಧನವಾಗಿ 20 ದಿನ ಕಳೆದರೂ, ಅವರನ್ನು ವಾಪಸ್ ಕರೆ ತರುವ ಕುರಿತು ಯಾವುದೇ ದೊಡ್ಡ ಬೆಳವಣಿಗೆಗಳು ನಡೆಯುತ್ತಿಲ್ಲ. ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ರಿಶ್ರಾ ವಾರ್ಡ್ ಸಂಖ್ಯೆ 13ರಲ್ಲಿರುವ ಸಾಹು ಅವರ ಕುಟುಂಬ ತೀವ್ರ ದುಖಃ ಮತ್ತು ಆತಂಕದಲ್ಲಿ ದಿನ ದೂಡುತ್ತಿದೆ. ಸಾಹು ಅವರ ಪತ್ನಿ ರಜನಿ ಸಾಹು ಏಳು ತಿಂಗಳ ಗರ್ಭಿಣಿಯಾಗಿದ್ದು, ತನ್ನ ಗಂಡನನ್ನು ನೆನೆದು ಕಣ್ಣೀರಿಟ್ಟಿದ್ದಾರೆ ಎಂದು ವರದಿಗಳು ಹೇಳಿವೆ.

“ನನ್ನ ಗಂಡನನ್ನು ಪಾಕಿಸ್ತಾನಿ ಸೇನೆ ಅಪಹರಿಸಿದೆ. ಅವರು ಸೇನೆಯ ವಶದಲ್ಲಿದ್ದಾರೆ. ಅವರ ಕಣ್ಣಿಗೆ ಬಟ್ಟೆ ಕಟ್ಟಿ ಕರೆದೊಯ್ಯುವ ಫೋಟೋ ಬಿಡುಗಡೆ ಮಾಡಿದ್ದಾರೆ” ಎಂದು ರಜಿನಿ ಸಾಹು ಅಳುತ್ತಾ ಹೇಳಿದ್ದಾರೆ.

“ಬಿಎಸ್‌ಎಫ್ ಅಧಿಕಾರಿಗಳು ನಮ್ಮ ಮನೆಗೆ ಭೇಟಿ ನೀಡಿ ನನ್ನ ಗಂಡನನ್ನು ಮರಳಿ ಕರೆತರಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಈಗ ಪರಿಸ್ಥಿತಿ ಯುದ್ಧದಂತಿದೆ. ಮುಂದೆ ಏನು ಸುದ್ದಿ ಬರುತ್ತದೆಯೋ ಗೊತ್ತಿಲ್ಲ” ಎಂದು ರಜನಿ ಕಳವಳ ವ್ಯಕ್ತಪಡಿಸಿದ್ದಾರೆ.

“ಒಂದು ತಿಂಗಳ ರಜೆ ಮುಗಿಸಿ ಹಿಂತಿರುಗಿದ ಪೂರ್ಣಂ, ಏಪ್ರಿಲ್ 1 ರಂದು ಕರ್ತವ್ಯಕ್ಕೆ ಮರಳಿದ್ದರು. ಏಪ್ರಿಲ್ 22ರ ರಾತ್ರಿ, ಅಪಹರಣಕ್ಕೆ ಒಳಗಾಗುವ ಕೆಲ ಗಂಟೆಗಳ ಮೊದಲು, ನನ್ನ ಆರೋಗ್ಯ ವಿಚಾರಿಸಲು ಕೊನೆಯ ಬಾರಿಗೆ ಕರೆ ಮಾಡಿದ್ದರು. ಆ ಬಳಿಕ ಇಷ್ಟು ದಿನ ಕಳೆದರೂ, ಅವರು ಬಗ್ಗೆ ಯಾವುದೇ ಸುದ್ದಿ ಬಂದಿಲ್ಲ” ಎಂದು ರಜನಿ ತಿಳಿಸಿದ್ದಾರೆ.

ದಂಪತಿಯ ಎಂಟು ವರ್ಷದ ಮಗನನ್ನು ಈಗ ನೆರೆಹೊರೆಯವರು ನೋಡಿಕೊಳ್ಳುತ್ತಿದ್ದಾರೆ. ಆತನಿಗೆ ಪರಿಸ್ಥಿತಿಯ ಗಂಭೀರತೆಯ ಅರಿವಿಲ್ಲ. ಪೂರ್ಣಂ ಅವರ ತಂದೆ, ನಿವೃತ್ತ ಭದ್ರತಾ ಸಿಬ್ಬಂದಿ ಭೋಲಾ ಸಾಹು ಅವರು, ಆರಂಭಿಕ ಭರವಸೆಗಳ ನಂತರದ ಸೇನೆಯ ಮೌನದ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದಾರೆ.

‘ಆಪರೇಷನ್ ಸಿಂಧೂರ’ ಬಗ್ಗೆ ಕೇಳಿದ ಕೂಡಲೇ ಒಮ್ಮೆಲೆ ಆಘಾತ ವ್ಯಕ್ತಪಡಿಸಿ, ಮುಖದ ಮೇಲೆ ಮುಸುಕನ್ನು ಎಳೆದುಕೊಂಡ ಯೋಧ ಪೂರ್ಣಂ ಪತ್ನಿ ರಜನಿ “ನನ್ನ ಸಿಂಧೂರವನ್ನು ನನಗೆ ಮರಳಿ ಕೊಡಿ” ಎಂದು ಸರ್ಕಾರಕ್ಕೆ ಮೊರೆಯಿಟ್ಟಿದ್ದಾರೆ ಎಂದು ವರದಿ ಹೇಳಿದೆ.

Related Articles

Back to top button