ಧರ್ಮಸ್ಥಳ 6ರಲ್ಲಿ ಸಿಕ್ಕ ಶವದ ಅವಶೇಷ ಫೊರೆನ್ಸಿಕ್ ತನಿಖೆಗೆ, 7,8ರಲ್ಲಿ ಕಳೇಬರ ಪತ್ತೆಯಾಗಿಲ್ಲ, ಮತ್ತಷ್ಟು ಉತ್ಪನನ ಮುಂದುವರಿಕೆ

Views: 50
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಬಳಿಯ ಕಾಡುಪ್ರದೇಶದಲ್ಲಿ ಅನಾಮಿಕ ಗುರುತಿಸಿದ ಪಾಯಿಂಟ್ ನಂಬರ್ 6ರಲ್ಲಿ ಪತ್ತೆಯಾಗಿರುವ ಅಸ್ಥಿ ಪಂಜರದ ಅವಶೇಷಗಳನ್ನು ವಿಧಿ ವಿಜ್ಞಾನ ಪರಿಣತರು ಪರಿಶೀಲಿಸುತ್ತಿದ್ದು, ಗುರುತು ಪತ್ತೆ ಪ್ರಯತ್ನ ಮುಂದುವರಿದಿದೆ. ಇದೇ ವೇಳೆ ಶುಕ್ರವಾರ ಏಳು ಮತ್ತು ಎಂಟನೇ ಸ್ಥಳದಲ್ಲಿ ಶೋಧ ಕಾರ್ಯ ನಡೆದಿದ್ದು ಇಲ್ಲಿ ಯಾವುದೇ ಕಳೇಬರಗಳು ಇರುವುದು ಪತ್ತೆಯಾಗಿಲ್ಲ. ಮತ್ತಷ್ಟು ಶೋಧ ಕಾರ್ಯ ಮುಂದುವರೆಯಲಿದೆ
ವಿಶೇಷ ತನಿಖಾ ತಂಡವು ಆರನೇ ಸಮಾಧಿ ಸ್ಥಳದಲ್ಲಿ ಸಿಕ್ಕ ಅಸ್ಥಿಪಂಜರದ ಅವಶೇಷಗಳನ್ನು ಪೊರೆನ್ಸಿಕ್ ಪರೀಕ್ಷೆಗೆ ಕಳುಹಿಸಿದೆ. ಇದನ್ನು ಡಿಎನ್ಎ ಪ್ರೊಫೈಲಿಂಗ್‌ಗಾಗಿ ಪೋರೆನ್ಸಿಕ್ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ.
ದವಡೆ ಹಲ್ಲುಗಳು ಮತ್ತು ತೊಡೆಯ ಮೂಳೆ ವ್ಯಕ್ತಿಯ ಗುರುತನ್ನು ಖಚಿತಪಡಿಸಿಕೊಳ್ಳಲು ನಿರ್ಣಾಯಕವಾಗಿದೆ. ನಂತರ ಮಾದರಿಯನ್ನು ಸತ್ತವರ ರಕ್ತ ಸಂಬಂಧಿಯ ಡಿಎನ್ಎ ಜೊತೆ ಹೋಲಿಸಲಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಇದೇ ವೇಳೆ ಎಸ್‌ಐಟಿ ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1995ರಿಂದೀಚೆಗೆ ಸಂಭವಿಸಿದ ಎಲ್ಲ ಅನುಮಾನಾಸ್ಪದ ಸಾವುಗಳು ಮತ್ತು ಯುಡಿ ಆರ್ (ಅನಾಮಿಕ ಮೃತದೇಹ) ಪ್ರಕರಣಗಳ ದಾಖಲೆ ಗಳನ್ನು ಕೆದಕಲು ಆರಂಭಿಸಿದೆ.






