ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದ ವರದಿಗೆ ಮಾಧ್ಯಮಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

Views: 97
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಅನಾಮಿಕ ದೂರುದಾರನೊಬ್ಬ ಆರೋಪಿಸಿದ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ ಈ ಮಧ್ಯೆ ವಿವಾದಕ್ಕೆ ಸಂಬಂಧಿಸಿ ವರದಿ ಮಾಡದಂತೆ ಮಾಧ್ಯಮಗಳಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ (ಆಗಸ್ಟ್ 8) ನಿರಾಕರಿಸಿದೆ.
ಧರ್ಮಸ್ಥಳ ದೇವಸ್ಥಾನದ ಕಾರ್ಯದರ್ಶಿ ಡಿ. ಹರ್ಷೇಂದ್ ಕುಮಾರ್ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ಕೋಡಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಾದ-ವಿವಾದ ಆಲಿಸಿದ ನ್ಯಾಯಾಲಯ, ಅರ್ಜಿಯನ್ನು ಹೊಸದಾಗಿ ನಿರ್ಧರಿಸುವಂತೆ ಕರ್ನಾಟಕದ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
ಧರ್ಮಸ್ಥಳದಲ್ಲಿ ಶವಗಳನ್ನು ಹೂಳಲಾಗಿದೆ ಎನ್ನುವ ಪ್ರಕರಣದ ವರದಿಗೆ ಸಂಬಂಧಿಸಿದಂತೆ ಬೆಂಗಳೂರು ಸಿವಿಲ್ ನ್ಯಾಯಾಲಯವು ಯುಟ್ಯೂಬ್ ಚಾನೆಲ್ ಕುಡ್ಲ ರ‍್ಯಾಂಪೇಜ್ ಮೇಲೆ ವಿಧಿಸಿದ್ದ ಪ್ರತಿಬಂಧಕ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಇದರ ವಿರುದ್ಧ ಹರ್ಷೇಂದ್ರ ಕುಮಾರ್ ಡಿ. ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
ದೇವಾಲಯ ಆಡಳಿತವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ, ʼʼದಿನದಿಂದ ದಿನಕ್ಕೆ ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಮಾನಹಾನಿಕರ ವರದಿಗಳನ್ನು ಪ್ರಕಟಿಸುತ್ತಿವೆʼʼ ಎಂದು ವಾದಿಸಿದರು. ಆದರೆ ಇದಕ್ಕಾಗಿ ಮಾಧ್ಯಮಗಳು ವರದಿ ಮಾಡುವುದನ್ನು ನಿರ್ಬಂಧಿಸಬೇಕೇ ಎಂದು ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರ ಪೀಠವು ಪ್ರಶ್ನಿಸಿತು.ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗುತ್ತದೆ ಎಂದರು.






