ದೆಹಲಿ ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲಿ ಅಪಾರ ಪ್ರಮಾಣದ ಹಣ ಪತ್ತೆ

Views: 181
ಕನ್ನಡ ಕರಾವಳಿ ಸುದ್ದಿ: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಅವರ ಮಾತೃ ನ್ಯಾಯಾಲಯ ಅಲಹಾಬಾದ್ ಹೈಕೋರ್ಟ್ಗೆ ವರ್ಗಾಯಿಸಲು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಗುರುವಾರ ನಿರ್ಧರಿಸಿದೆ.
ನ್ಯಾಯಮೂರ್ತಿ ವರ್ಮಾ ಅವರ ಮನೆಯಲ್ಲಿ ಅಗ್ನಿ ದುರಂತ ಸಂಭವಿಸಿದ ನಂತರ ಮನೆಯಲ್ಲಿ ನಗದು ಪತ್ತೆಯಾದ ವರದಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಗುರುವಾರ ಸಂಜೆ ಸಭೆ ಸೇರಿ ಈ ನಿರ್ಧಾರ ಕೈಗೊಂಡಿದೆ.
ಸಿಜೆಐ ಖನ್ನಾ ಅವರು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಅವರಿಂದ ಘಟನೆಯ ಬಗ್ಗೆ ಸತ್ಯಶೋಧನಾ ವರದಿಯನ್ನು ಕೋರಿದ್ದಾರೆ. ಮೂಲಗಳ ಪ್ರಕಾರ, ಸುಪ್ರೀಂ ಕೋರ್ಟ್ನ ಐದು ಸದಸ್ಯರ ಕೊಲಿಜಿಯಂ ವರ್ಗಾವಣೆಗೆ ಶಿಫಾರಸು ಮಾಡಲು ಸರ್ವಾನುಮತದಿಂದ ನಿರ್ಧರಿಸಿದೆ.
ನ್ಯಾಯಮೂರ್ತಿ ವರ್ಮಾ ಅವರ ನಿವಾಸದಲ್ಲಿ ಹಣವನ್ನು ಸುಡುತ್ತಿರುವ ವೀಡಿಯೊದ ಬಗ್ಗೆ ಸದಸ್ಯರಿಗೆ ಮಾಹಿತಿ ಸಿಕ್ಕ ನಂತರ ಕೊಲಿಜಿಯಂ ಈ ನಿರ್ಧಾರ ಕೈಗೊಂಡಿದೆ. ಹೈಕೋರ್ಟ್ ನ್ಯಾಯಾಧೀಶರ ನಿವಾಸದಲ್ಲಿ ಎಷ್ಟು ಹಣ ಪತ್ತೆಯಾಗಿದೆ ಎಂಬ ಬಗ್ಗೆ ಯಾವುದೇ ಅಂದಾಜು ಸಿಕ್ಕಿಲ್ಲ ಎಂದು ಈ ಬೆಳವಣಿಗೆಯ ಬಗ್ಗೆ ತಿಳಿದಿರುವ ಮೂಲಗಳು ತಿಳಿಸಿವೆ.
ಘಟನೆಯಲ್ಲಿ ಏನಾಯಿತು ಎಂಬ ಬಗ್ಗೆ ಸಿಜೆಐ ವಿವರಿಸಿದ ನಂತರ ನ್ಯಾಯಮೂರ್ತಿ ವರ್ಮಾ ಅವರನ್ನು ವರ್ಗಾಯಿಸಲು ಕೊಲಿಜಿಯಂ ಸದಸ್ಯರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಂತರಿಕವಾಗಿ ತನಿಖೆ ಪ್ರಾರಂಭಿಸಬಹುದಾ ಅಥವಾ ಇಲ್ಲವಾ ಎಂಬುದನ್ನು ನಿರ್ಧರಿಸುವ ಸಲುವಾಗಿ ಸತ್ಯಶೋಧನಾ ವರದಿಯನ್ನು ಆದಷ್ಟು ಬೇಗನೆ ಪಡೆದುಕೊಳ್ಳುವಂತೆ ಕೊಲಿಜಿಯಂ ಸದಸ್ಯರು ಸಿಜೆಐ ಅವರಿಗೆ ಸಲಹೆ ನೀಡಿದ್ದರು ಎಂದು ಮೂಲಗಳು ಹೇಳಿವೆ.
ಮಾರ್ಚ್ 14ರಂದು ರಾತ್ರಿ 11.30ರ ಸುಮಾರಿಗೆ ನ್ಯಾಯಮೂರ್ತಿಗಳ ಮನೆಯಲ್ಲಿ ಬೆಂಕಿ ಬಿದ್ದ ಘಟನೆ ಸಂಭವಿಸಿತ್ತು. ನಗದು ಪತ್ತೆಯಾದ ಬಗ್ಗೆ ನ್ಯಾಯಮೂರ್ತಿ ವರ್ಮಾ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಮೂಲಗಳ ಪ್ರಕಾರ, ಬೆಂಕಿ ಅವಘಡ ನಡೆದಾಗ ನ್ಯಾಯಮೂರ್ತಿ ವರ್ಮಾ ಮನೆಯಲ್ಲಿರಲಿಲ್ಲ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿಯನ್ನು ನಂದಿಸುವಾಗ ಕೋಣೆಯಲ್ಲಿ ಅವರಿಗೆ ಹಣ ಪತ್ತೆಯಾಗಿದೆ.