ರಾಜಕೀಯ

ಜೈಲಿನಲ್ಲೇ ಆಡಳಿತ, ಮುಖ್ಯಮಂತ್ರಿ ಕಚೇರಿ ತೆರೆಯುವ ಚಿಂತನೆ ನಡೆಸಿದ ಕೇಜ್ರಿವಾಲ್ !

Views: 57

ನವದೆಹಲಿ :ಮದ್ಯ ನೀತಿ ಹಗರಣದಲ್ಲಿ ಇಡಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಜೈಲಿನಿಂದಲೇ ಆಡಳಿತ ನಡೆಸಿದ್ದಾರೆ. ರಾಜಧಾನಿ ದೆಹಲಿಯಲ್ಲಿ ತಲೆದೋರಿರುವ ನೀರಿನ ಸಮಸ್ಯೆ ಬಗ್ಗೆ ಜೈಲಿನಿಂದಲೇ ಮೊದಲ ಆದೇಶ ಹೊರಡಿಸಿದ್ದಾರೆ.

ಜಲಸಂಪನ್ಮೂಲ ಖಾತೆ ನಿರ್ವಹಿಸುತ್ತಿರುವ ಅತಿಶಿ ಅವರಿಗೆ ಈ ಸಂಬಂಧ ಆದೇಶ ಕಳುಹಿಸಿದ್ದಾರೆ. ಈ ಬಗ್ಗೆ ಅವರು ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಪ್ರಕಟಣೆ ಹೊರಡಿಸಲಿದ್ದಾರೆ.

ಕೇಜ್ರಿವಾಲ್ ಅವರು ಜೈಲಿನಿಂದಲೇ ಸಚಿವರಿಗೆ ಪತ್ರದ ಮೂಲಕ ನಿರ್ದೇಶನ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವೆ ಅತಿಶಿ, ಕೇಜ್ರಿವಾಲ್ ಅವರು ದೆಹಲಿ ನಿವಾಸಿಗಳು ಎದುರಿಸುತ್ತಿರುವ ನೀರು ಮತ್ತು ಒಳಚರಂಡಿ ಸಮಸ್ಯೆಗಳ ಬಗ್ಗೆ ಜೈಲಿನಿಂದಲೇ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. 2ಕೋಟಿ ದೆಹಲಿ ಜನರನ್ನು ತಮ್ಮ ಕುಟುಂಬವೆಂದು ಭಾವಿಸಿರುವ ಕೇಜ್ರಿವಾಲ್ ಅವರಿಂದ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಹೇಳಿದ್ದಾರೆ.

ಬಿಜೆಪಿ ವಿರುದ್ಧ ಕಿಡಿಕಾರಿರುವ ಅವರು ಕೇಜ್ರಿವಾಲ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿರಬಹುದು, ಅವರಿಗೆ ದೆಹಲಿ ಜನರ ಬಗ್ಗೆ ಇರುವ ಪ್ರೀತಿ ಮತ್ತು ಕಾಳಜಿ ಕಟ್ಟಿಹಾಕಲು ಸಾಧ್ಯವಿಲ್ಲ. ಕೇಜ್ರಿವಾಲ್ ಅವರು ಜೈಲಿನಲ್ಲಿದ್ದರೂ ಯಾವುದೇ ಕೆಲಸಕಾರ್ಯಗಳು ನಿಲ್ಲುವುದಿಲ್ಲ ಎಂದು ಹೇಳಿದರು.

ಕೇಜ್ರಿವಾಲ್ ಅವರು ಬರೆದಿರುವ ಪತ್ರವನ್ನು ಓದಿರುವ ಅವರು, ದೆಹಲಿಯ ಹಲವೆಡೆ ನೀರು ಸರಬರಾಜು ಮತ್ತು ಒಳಚರಂಡಿ ಸಮಸ್ಯೆಗಳು ತಲೆದೋರಿವೆ. ಈ ಚಿಂತೆ ನನ್ನನ್ನು ಕಾಡುತ್ತಿದೆ. ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಇತರ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು, ಈ ಮೂಲಕ ಸಮಸ್ಯೆ ಎದುರಿಸುತ್ತಿರುವ ಜನರಿಗೆ ತಕ್ಷಣ ಪರಿಹಾರ ಸಿಗಬೇಕು. ಅಗತ್ಯ ಬಿದ್ದರೆ ಲೆಫ್ಟಿನೆಂಟ್ ಗೌರ್‍ನರ್ ಅವರಿಂದ ನೆರವು ಪಡೆಯಬೇಕು. ಅವರು ಖಂಡಿತವಾಗಿಯೂ ಸಹಾಯ ಮಾಡುತ್ತಾರೆ ಎಂದು ಹೇಳಿದ್ದಾಗಿ ಅವರು ತಿಳಿಸಿದರು.

ಕೇಜ್ರಿವಾಲ್ ಬಂಧನಕ್ಕೊಳಗಾದ ನಂತರ ದೆಹಲಿ ಜನತೆಯ ಬಗ್ಗೆ ಸದಾ ಆಲೋಚನೆ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ. ಅಕ್ರಮ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು.

ಆದರೆ, ಕೇಜ್ರಿವಾಲ್ ಬಂಧನವಾಗಿದ್ದರೂ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡದೆ ಆಡಳಿತ ನಡೆಸುತ್ತಿದ್ದಾರೆ. ಮತ್ತೊಂದೆಡೆ ಜೈಲಿನಲ್ಲೇ ಮುಖ್ಯಮಂತ್ರಿ ಕಚೇರಿ ತೆರೆಯುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಕೇಜ್ರಿವಾಲ್ 28 ರವರೆಗೆ ಜಾರಿನಿರ್ದೇಶನಾಲಯದ ವಶಕ್ಕೆ ಒಪ್ಪಿಸಲಾಗಿದೆ.

 

 

Related Articles

Back to top button