ಜೂಜು ಮತ್ತು ಪ್ರಾಣಿ ಹಿಂಸೆ ಹೆಸರಲ್ಲಿ ಸಾಂಪ್ರದಾಯಿಕ ಕೋಳಿ ಅಂಕಕ್ಕೂ ನಿಷೇಧ!
ಜೂಜು ಮತ್ತು ಪ್ರಾಣಿ ಹಿಂಸೆ ಹೆಸರಲ್ಲಿ ಸರ್ಕಾರದಿಂದ ಕೋಳಿ ಅಂಕಕ್ಕೆ ಕಡಿವಾಣ ಹಾಕಲು ಡಿಜಿಪಿಯಿಂದ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಅಧಿಕೃತ ಆದೇಶ ಕಳುಹಿಸಲಾಗಿದೆ

Views: 131
ರಾಜ್ಯದೆಲ್ಲೆಡೆ ನಡೆಯುವ ಎಲ್ಲಾ ವಿಧದ ಕೋಳಿ ಅಂಕಗಳಿಗೆ ನಿಷೇಧ ಹೇರುವ ಆದೇಶವನ್ನು ಪೋಲೀಸ್ ಇಲಾಖೆ ಹೊರಡಿಸಿದೆ. ಈ ನಿಟ್ಟಿನಲ್ಲಿ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಕೆಲವೊಂದು ಸಾಂಪ್ರದಾಯಿಕ ಕೋಳಿ ಅಂಕಗಳಿಗೂ ಈ ಆದೇಶ ಅನ್ವಯಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಈ ಸಂಬಂಧ ಕೋಳಿ ಅಂಕ ಆಯೋಜಕರಿಗೆ ಖಡಕ್ ಆದೇಶ ನೀಡಿದ್ದಾರೆ.
ಈ ಆದೇಶದ ಹಿನ್ನಲೆಯಲ್ಲಿ ಪೋಲೀಸರು ಎಲ್ಲಾ ಕಡೆಗಳಲ್ಲಿ ನಡೆಯುವ ಕೋಳಿ ಅಂಕಗಳಿಗೆ ದಾಳಿ ನಡೆಸಲು ಆರಂಭಿಸಿದ್ದಾರೆ. ಅಲ್ಲದೆ ಕೋಳಿ ಅಂಕಕ್ಕೆ ಅನುಮತಿಗಾಗಿ ಯಾರೂ ಪೋಲೀಸ್ ಠಾಣೆಗೆ ಬರುವಂತಿಲ್ಲ ಎನ್ನುವ ಸೂಚನೆಯನ್ನೂ ನೀಡಿದ್ದಾರೆ. ಈ ಸೂಚನೆಯ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಜೂಜು ಆಧಾರಿತ ಕೋಳಿ ಅಂಕಗಳಿಗೆ ಹೊಡೆತ ಬೀಳುವ ಜೊತೆಗೆ ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿರುವ ಕೋಳಿ ಅಂಕಕ್ಕೂ ಸಮಸ್ಯೆಯಾಗಿದೆ.
ಹದಿಹರೆಯದ ಯುವಕರನ್ನೇ ಈ ಕೋಳಿ ಅಂಕಗಳು ಇತ್ತೀಚಿನ ದಿನಗಳಲ್ಲಿ ಆಕರ್ಷಿಸುತ್ತಿದ್ದು, ಇದರಿಂದಾಗಿ ಯುವಕರ ಭವಿಷ್ಯದ ಜೊತೆ ಕುಟುಂಬದ ಬದುಕೂ ದುಸ್ತರವಾಗುವ ಸ್ಥಿತಿ ತಲುಪಿದೆ. ಲಕ್ಷಾಂತರ ರೂಪಾಯಿ ವಹಿವಾಟಿನಲ್ಲಿ ನಡೆಯುವ ಈ ಕೋಳಿ ಅಂಕದ ಜೂಜಿನಿಂದಾಗಿ ಹೆಚ್ಚಿನ ಮಂದಿ ಇದರತ್ತ ಆಕರ್ಷಿತರಾಗುತ್ತಿದ್ದಾರೆ.
ಈ ಕ್ರಮದಲ್ಲಿ ಯಾವುದೇ ಜೂಜಿಗೆ ಅವಕಾಶವಿಲ್ಲದಿದ್ದರೂ, ಇತ್ತೀಚಿನ ದಿನಗಳಲ್ಲಿ ಮಾತ್ರ ಸಂಪ್ರದಾಯಿಕ ಕೋಳಿ ಅಂಕವನ್ನೂ ಜೂಜು ಆವರಿಸಿದೆ. ಇದರಿಂದಾಗಿ ಸಾಂಪ್ರದಾಯಿಕ ಕೋಳಿ ಅಂಕವನ್ನೂ ಇಂದು ಜೂಜಿನ ಮೂಲಕವೇ ಅಳೆಯುವ ಸ್ಥಿತಿ ನಿರ್ಮಾಣವಾಗಿದೆ. ಜೂಜಿನ ಕಾರಣಕ್ಕಾಗಿ ಸಂಪ್ರದಾಯಿಕ ಕೋಳಿ ಅಂಕಕ್ಕೂ ಸಮಸ್ಯೆಯಾಗಿರುವುದು ಮಾತ್ರ ವಿಪರ್ಯಾಸವಾಗಿದೆ