ಚಿನ್ನದ ಆಮಿಷವೊಡ್ಡಿ ಬೆಳ್ತಂಗಡಿಯಿಂದ ಮೂವರನ್ನು ತುಮಕೂರಿಗೆ ಕರೆದು ಹಣ ದೋಚಿ ಕೊಲೆ ಶಂಕೆ?

Views: 102
ತುಮಕೂರು ತಾಲೂಕಿನ ಕುಚ್ಚಂಗಿ ಕೆರೆಯ ಬಳಿ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಬೆಳ್ತಂಗಡಿ ಮೂಲದ ಮೂವರ ಮೃತದೇಹ ಪತ್ತೆಯಾಗಿತ್ತು. ಈ ಕುರಿತ ತನಿಖೆಯ ಹಂತದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಕುಪ್ರಸಿದ್ಧ ನಕಲಿ ಚಿನ್ನದ ವಂಚನಾ ಜಾಲ ಈ ಭಯಾನಕ ಕೃತ್ಯವನ್ನು ಎಸಗಿರುವ ಶಂಕೆ ಮೂಡಿದೆ.
ಘಟನೆಯಲ್ಲಿ ಸಾಹುಲ್ ಹಮೀದ್ (45), ಇಸಾಕ್ (56) ಹಾಗೂ ಸಿದ್ದಿಕ್ (34) ಎಂಬುವವರು ಮೃತರು. ಸಾಹುಲ್ ಹಮೀದ್, ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾನ್ ನಿವಾಸಿಯಾಗಿದ್ದು, ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಇಸಾಕ್ ಕುವೆಟ್ಟು ಗ್ರಾಮದ ಮದಡ್ಕ ನಿವಾಸಿಯಾಗಿದ್ದು, ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದರು ಮತ್ತು ಸಿದ್ದಿಕ್ ಶಿರ್ಲಾಲು ಗ್ರಾಮದ ನಿವಾಸಿಯಾಗಿದ್ದರು.
ಈ ಮೂವರು 12 ದಿನಗಳ ಹಿಂದೆ ಬೆಳ್ತಂಗಡಿ ಮದ್ದಡ್ಕದ ರಫೀಕ್ ಎಂಬವರ ಕಾರನ್ನು ಬಾಡಿಗೆ ಪಡೆದುಕೊಂಡು ತುಮಕೂರಿಗೆ ಆಗಮಿಸಿದ್ದರು. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ, ಕಡಿಮೆ ಬೆಲೆಗೆ ಚಿನ್ನವನ್ನು ನೀಡುತ್ತೇವೆ ಎಂದು ದುಷ್ಕರ್ಮಿಗಳು ಸುಳ್ಳು ಹೇಳಿ ಹಣ ದೋಚುವ ಪ್ಲಾನ್ ಮಾಡಿ ಈ ಮೂವರನ್ನು ತುಮಕೂರಿಗೆ ಕರೆಸಿಕೊಂಡಿದ್ದರು. ಗುರುವಾರ ಸಂಜೆವರೆಗೂ ಕುಟುಂಬಸ್ಥರ ಜೊತೆ ಸಂಪರ್ಕದಲ್ಲಿದ್ದ ಇಸಾಕ್ನ ಮೊಬೈಲ್ ಗುರುವಾರ ರಾತ್ರಿ ಸ್ವಿಚ್ ಆಫ್ ಆಗಿತ್ತು. ಬಳಿಕ ಕೈಕಾಲು ಕಟ್ಟಿ ಹಾಕಿ ಕೊಲೆ ಮಾಡಿ ಗುರತು ಪತ್ತೆಯಾಗದಂತೆ ಕಾರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗಿದೆ. ಮೃತದೇಹ ಸುಟ್ಟು ಕರಕಲಾಗಿದ್ದು, ಇಬ್ಬರ ಮೃತದೇಹ ಕಾರಿನ ಢಿಕ್ಕಿಯಲ್ಲಿ ಮತ್ತು ಓರ್ವನ ಮೃತದೇಹ ಕಾರಿನ ಮಧ್ಯದಲ್ಲಿತ್ತು ಎಂದು ತಿಳಿದು ಬಂದಿದೆ.
ಮೂವರ ಶವ ಕಾರಿನಲ್ಲಿ ಪತ್ತೆಯಾಗಿರುವ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಾರು, ದಕ್ಷಿಣ ಕನ್ನಡ ಜಿಲ್ಲೆಯ ರಫೀಕ್ ಎಂಬವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಅವರನ್ನು ಪೊಲೀಸರು ವಿಚಾರಿಸಿದಾಗ ಅವರು ಇಸಾಕ್ ಎಂಬಾತನಿಗೆ 15 ದಿನಗಳ ಹಿಂದೆ ಕಾರು ಕೊಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಇದರಿಂದಾಗಿ ಮೃತರ ಗುರುತು ಪತ್ತೆಕಾರ್ಯ ಸುಲಭವಾಗಿದೆ.
ಪೊಲೀಸರು ವಶಕ್ಕೆ ಪಡೆದುಕೊಂಡಿರುವ ದುಷ್ಕರ್ಮಿಗಳ ಹೆಸರನ್ನು ಈವರೆಗೆ ಬಹಿರಂಗಪಡಿಸಲಾಗಿಲ್ಲ. ಚಿನ್ನದ ಆಮಿಷವೊಡ್ಡಿ ಮೂವರನ್ನು ತುಮಕೂರಿಗೆ ಕರೆದು ಹಣ ದೋಚಿ ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಬೆಳ್ತಂಗಡಿ ಮೂಲದ ಮೂವರು ಕಾರೊಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಅತ್ಯಂತ ಆತಂಕಕಾರಿಯಾದ ಘಟನೆಯಾಗಿದೆ. ಅತೀ ಸಂಶಯಾಸ್ಪದ ಈ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ, ನೈಜ ವಿಷಯವನ್ನು ಸಾರ್ವಜನಿಕಗೊಳಿಸಬೇಕೆಂದು ತುಮಕೂರು ಎಸ್ಪಿ ಮತ್ತು ಕರ್ನಾಟಕದ ಡಿಜಿಪಿಗೆ ಅಗ್ರಹಿಸಿದ್ದಾರೆ.