ಚಂಡಮಾರುತ ಭೀತಿ: ಕರಾವಳಿ ತೀರದಲ್ಲಿ ಕಟ್ಟೆಚ್ಚರ

Views: 0
ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆ ಮಿಂಚು,ಗುಡುಗು ಸಹಿತ ಮಳೆ ಆಗುವ ಸಂಭವವಿದೆ. ಅರಬ್ಬಿ ಸಮುದ್ರದ ಲಕ್ಷ ದ್ವೀಪ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ಉಂಟಾಗಿರುವ ಪರಿಣಾಮ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆಯಿದ್ದು ಕರಾವಳಿ ಸಹಿತ ರಾಜ್ಯದ ವಿವಿಧಡೆ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಮಂಗಳವಾರ ಚಂಡಮಾರುತ ಸಾಧ್ಯತೆ ಹಿನ್ನಲೆಯಲ್ಲಿ ನವ ಮಂಗಳೂರು ಬಂದರಿಗೆ ಸಂಬಂಧಿಸಿದಂತೆ ಹಡಗುಗಳು, ಬಂದರು ಬಳಕೆದಾರರು ಸ್ಪೇಕ್ ಹೋಲ್ಡರ್ ಗಳು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಹಾಗೂ ನವಮಂಗಳೂರು ಬಂದರಿನಲ್ಲಿ ಎಲ್ಲಾ ರೀತಿಯ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗುವುದು ಬಂದರಿನಿಂದ ತೆರಳುವ ಹಡಗುಗಳ ಚಂಡಮಾರುತ ಸಮೀಪಿಸುವ ಮುನ್ನವೇ ಮುನ್ನೆಚ್ಚರಿಕೆಯೊಂದಿಗೆ ತೆರಳಬೇಕು ಎಂದು ಬಂದರು ಆಡಳಿತ ಸೂಚನೆ ನೀಡಿದೆ.
ಸೋಮವಾರ ಮುಂಜಾನೆಯಿಂದಲೇ ಹನಿ ಹನಿ ಮಳೆಯಾಗಿದ್ದು ಮಧ್ಯಾಹ್ನದವರೆಗೆ ಬಿಸಿಲಿನ ವಾತಾವರಣ ಇದ್ದು, ಸಂಜೆ ಹೊತ್ತಿಗೆ ಕರಾವಳಿಯಲ್ಲಿ ಉತ್ತಮ ಮಳೆಯಾಗಿದೆ.
ಹವಾಮಾನ ಇಲಾಖೆ ಸೂಚನೆಯಂತೆ ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಬೀಸುವ ಸಾಧ್ಯತೆ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಮೀನುಗಾರಿಕೆಗೆ ತೆರಳದಂತೆ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಆದೇಶಿಸಿದ್ದಾರೆ.