ಇತರೆ

ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೂವರು ಮಹಿಳೆಯರ ಸಾವು: ವೈದ್ಯರ ವಿರುದ್ಧ ಪ್ರತಿಭಟನೆ

Views: 84

ತುಮಕೂರು: ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೂವರು ಮಹಿಳೆಯರು ಒಂದೇ ವಾರದಲ್ಲಿ ಸಾವನ್ನಪ್ಪಿರೋ ಘಟನೆ ಪಾವಗಡ ತಾಲೂಕಿನಲ್ಲಿ ನಡೆದಿದೆ.

ಆಸ್ಪತ್ರೆ ವೈದ್ಯರ ವಿರುದ್ಧ ಗಂಭೀರ ಆರೋಪ ಮಾಡಿರುವ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜವಂತಿ ಗ್ರಾಮದ ಅಂಜಲಿ (25), ಬ್ಯಾಡನೂರು ಗ್ರಾಮದ ನರಸಮ್ಮ (40), ವೀರಲಗೊಂದಿ ಗ್ರಾಮದ ಅನಿತಾ (30) ಮೃತ ದುರ್ದೈವಿಗಳು.

ಮೂವರು ಮಹಿಳೆಯರು ಕಳೆದ ಫೆಬ್ರವರಿ 22ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅನಿತಾ ಫೆ.22ರಂದು ಸಾವನ್ನಪ್ಪಿದ್ದಾರೆ. ಅಂಜಲಿ ಎಂಬ ಮಹಿಳೆ ಫೆಬ್ರವರಿ 24ರಂದು ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಫೆಬ್ರವರಿ 25ರಂದು ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನರಸಮ್ಮ ಕೂಡ ಸಾವನ್ನಪ್ಪಿದ್ದಾರೆ.

ವೈದ್ಯರ ನಿರ್ಲಕ್ಷ್ಯದಿಂದಲೇ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಮೃತ ಮಹಿಳೆಯರ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ರೊಚ್ಚಿಗೆದ್ದ ಕುಟುಂಬಸ್ಥರು ಪಾವಗಡ ಪಟ್ಟಣದಲ್ಲಿ ಬಳ್ಳಾರಿ ರಸ್ತೆ ತಡೆದು ಘೋಷಣೆ ಕೂಗಿದರು. ರಸ್ತೆಯ ಮಧ್ಯೆ ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು. ಮೃತರ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಪಾವಗಡ ತಹಶೀಲ್ದಾರ್, ತಾಲೂಕು ವೈದ್ಯಾಧಿಕಾರಿ ಭೇಟಿ ನೀಡಿದ್ದು, ಪ್ರತಿಭಟನೆ ಕೈ ಬಿಡುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

Related Articles

Back to top button