ಗರಿಕೆಮಠ ಅಕ್ರಮ ಸ್ಫೋಟಕ ಪ್ರಕರಣ: ಆರೋಪಿಗಳ ಬಂಧಿಸುವಲ್ಲಿ ವಿಫಲ ಪೊಲೀಸ್ ಸಿಬ್ಬಂದಿ ಅಮಾನತು

Views: 127
ಕನ್ನಡ ಕರಾವಳಿ ಸುದ್ದಿ: ಗರಿಕೆಮಠ ಕಲ್ಲುಕೋರೆಯಲ್ಲಿ ಅಕ್ರಮವಾಗಿ ಸ್ಫೋಟಕ ಬಳಸಿ ಬಂಡೆ ಒಡೆಯುತ್ತಿದ್ದಾಗ ಸಂಭವಿಸಿದ ಸ್ಫೋಟದಲ್ಲಿ ಓರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಪೇದೆ ಸಂತೋಷ್ ಅಮಾನತುಗೊಂಡವರು, ಪಿ.ಎಸ್.ಐ. ಅಶೋಕ್ ಅವರನ್ನು ಒಒಡಿ ಮೇಲೆ ಪಡುಬಿದ್ರಿ ಠಾಣೆಗೆ ವರ್ಗಾಯಿಸಲಾಗಿದೆ.
ಕಾರ್ಮಿಕ ಸೆಂಥಿಲ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸಿದಾಗ ಪ್ರಕರಣಕ್ಕೆ ಸಂಬಂಧಿಸಿ ಶರತ್ ಹಾಗೂ ಮಹಮ್ಮದ್ ಬಶೀರ್ ಅವರು ಒಂದು ಎಕ್ರೆ ವಿಸ್ತೀರ್ಣದ ತಮ್ಮ ಕಲ್ಲುಕೋರೆಯಲ್ಲಿ ಅಕ್ರಮವಾಗಿ ಸ್ಫೋಟಕಗಳನ್ನು ಬಳಸಿದ್ದು ತಿಳಿದುಬಂದಿತ್ತು.
ಬಳಿಕ ಗರಿಕೆಮಠ ನಿವಾಸಿ, ಕಲ್ಲುಕೋರೆ ಕಾರ್ಮಿಕ ರಾಜು ಎಂಬಾತನನ್ನು ಸ್ಫೋಟಕ್ಕೆ ಮದ್ದುಗಳನ್ನು ಬಳಸಲು ಸಹಕಾರ ನೀಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಮುಖ್ಯ ಆರೋಪಿ ಬಶೀರ್‌ನನ್ನು ಬಂಧಿಸಲು ತೆರಳಿದ ಸಂದರ್ಭದಲ್ಲಿ ಆತ ಪೊಲೀಸರ ಎದುರೇ ಮನೆಯಿಂದ ನಾಪತ್ತೆಯಾಗಿದ್ದ ಎನ್ನಲಾಗಿದೆ. ಪ್ರಕರಣದ ವಿಚಾರಣೆ ಹಾಗೂ ಆರೋಪಿಗಳ ಬಂಧಿಸುವಲ್ಲಿ ಕರ್ತವ್ಯಲೋಪವಾಗಿದೆ ಎನ್ನುವ ನಿಟ್ಟಿನಲ್ಲಿ ಸಿಬಂದಿ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಎಸ್.ಪಿ. ತಿಳಿಸಿದ್ದಾರೆ.