ರಾಜಕೀಯ

ಕೋಲಾರ ಟಿಕೆಟ್:ಕೈನಲ್ಲಿ ಭಿನ್ನಮತ ಸ್ಫೋಟ, ಶಾಸಕರ ರಾಜೀನಾಮೆ..! ವಿಧಾನಸೌಧದಲ್ಲಿ ಹೈ ಡ್ರಾಮ..!

Views: 107

ಬೆಂಗಳೂರು, ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಿಕೆ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಸಚಿವ ಕೆ.ಹೆಚ್ ಮುನಿಯಪ್ಪರವರ ಅಳಿಯನಿಗೆ ಟಿಕೆಟ್ ನೀಡುವ ವರಿಷ್ಠರ ಚಿಂತನೆಗೆ ಭಾರಿ ವಿರೋಧ ವ್ಯಕ್ತವಾಗಿದ್ದು, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್, ಕಾಂಗ್ರೆಸ್ ಶಾಸಕರಾದ ಕೊತ್ತೂರು ಮಂಜುನಾಥ, ನಂಜೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗೂ ವಿಧಾನ ಪರಿಷತ್ ಸದಸ್ಯರಾದ ನಜೀರ್‌ಅಹ್ಮದ್,ಅನಿಲ್‌ಕುಮಾರ್ ಇವರುಗಳು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈ ಶಾಸಕರ ರಾಜೀನಾಮೆ ವಿಚಾರದಲ್ಲಿ ವಿಧಾನಸೌಧದಲ್ಲಿಂದು ಹೈ ಡ್ರಾಮವೇ ನಡೆಯಿತು.

ಇಂದು ಬೆಳಿಗ್ಗೆ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಬೆಂಗಳೂರಿನಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮ ಅಳಿಯನಿಗೆ ಟಿಕೆಟ್ ಪಕ್ಕಾ ಮಾಡಿಕೊಂಡಿರುವ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಸಚಿವ ಡಾ.ಎಂ.ಸಿ ಸುಧಾಕರ್ ಸೇರಿದಂತೆ ಕೋಲಾರದ ಕಾಂಗ್ರೆಸ್ ಶಾಸಕರೆಲ್ಲ ಸಿಡಿದೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ವಿಧಾನಸೌಧಕ್ಕೆ ಆಗಮಿಸಿದಾಗ ಪ್ರಹಸನವೇ ನಡೆದು ಹೋಯಿತು.ಕೋಲಾರ ಕ್ಷೇತ್ರದ ಟಿಕೆಟ್‌ನ್ನು ಮುನಿಯಪ್ಪ ಕುಟುಂಬದವರಿಗೆ ನೀಡಲು ಮೊದಲಿನಿಂದಲೂ ಇವರುಗಳು ವಿರೋಧವಿತ್ತು. ಇಂದು ಕೋಲಾರದ ಕಾಂಗ್ರೆಸ್‌ನ ಬಣ ರಾಜಕೀಯ ಮತ್ತೆ ಜಗಜ್ಜಾಹೀರಾಗಿದೆ.ಕೋಲಾರದ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲು ವಿಧಾನಸೌಧಕ್ಕೆ ಆಗಮಿಸಿರುವ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಕೋಲಾರ ಉಸ್ತುವಾರಿ ಸಚಿವ ಭೈರತಿ ಸುರೇಶ್ ಅವರು ವಿಧಾನಸೌಧಕ್ಕೆ ಆಗಮಿಸಿ ಸಚಿವ ಡಾ. ಎಂ.ಸಿ ಸುಧಾಕರ್ ಸೇರಿದಂತೆ ರಾಜೀನಾಮೆ ನೀಡಲು ಬಂದಿದ್ದ ಶಾಸಕರ ಮನವೊಲಿಸುವ ಕೆಲಸವನ್ನೂ ಮಾಡಿ ಮುಖ್ಯಮಂತ್ರಿಗಳಿಂದಲೂ ದೂರವಾಣಿ ಮಾಡಿಸಿ ಶಾಸಕರುಗಳು ರಾಜೀನಾಮೆ ನೀಡದಂತೆ ನೋಡಿಕೊಂಡರು.

ಸಂಜೆ ಮುಖ್ಯಮಂತ್ರಿಗಳು ಬೆಂಗಳೂರಿಗೆ ಬರಲಿದ್ದು, ಕೋಲಾರ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಅಸಮಾಧಾನಗೊಂಡಿರುವ ಶಾಸಕರ ಜತೆ ಮಾತನಾಡಿ ಎಲ್ಲವನ್ನು ಬಗೆಹರಿಸಲಿದ್ದಾರೆ. ಅಲ್ಲಿಯವರೆಗೂ ರಾಜೀನಾಮೆ ನೀಡದಂತೆ ಮುಖ್ಯಮಂತ್ರಿಗಳು ಹೇಳಿದ್ದಾರೆ ಮುಖ್ಯಮಂತ್ರಿಗಳ ಸಭೆಯ ನಂತರ ಎಲ್ಲವೂ ಬಗೆಹರಿಯಲಿದೆ ಎಂದು ಸಚಿವ ಭೈರತಿ ಸುರೇಶ್ ಹೇಳಿದರು.ಕೋಲಾರ ಕ್ಷೇತ್ರದ ಟಿಕೆಟ್ ಇನ್ನು ಅಂತಿಮಗೊಂಡಿಲ್ಲ. ಈ ಬಗ್ಗೆ ಎಐಸಿಸಿ ಅಧ್ಯಕ್ಷರೂ ಮಾತನಾಡಿದ್ದಾರೆ. ಸಂಜೆಯ ಸಭೆಯ ನಂತರ ಎಲ್ಲವೂ ತೀರ್ಮಾನವಾಗಲಿದೆ ಎಂದರು.

ರಾಜೀನಾಮೆ ನೀಡಲು ವಿಧಾನಸೌಧದಲ್ಲಿರುವ ವಿಧಾನಸಭಾಧ್ಯಕ್ಷ ಹಾಗೂ ವಿಧಾನ ಪರಿಷತ್‌ನ ಸಭಾಪತಿಗಳ ಕಚೇರಿಗೆ ರಾಜೀನಾಮೆ ಪತ್ರ ಹಿಡಿದು ಬಂದಿದ್ದ ಶಾಸಕರುಗಳಾದ ನಜೀರ್‌ಅಹ್ಮದ್, ಅನಿಲ್‌ಕುಮಾರ್, ಕೊತ್ತನೂರು ಮಂಜುನಾಥ್, ನಂಜೇಗೌಡ ಇವರುಗಳು ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ರಾಜೀನಾಮೆ ಪತ್ರಗಳನ್ನು ಸಲ್ಲಿಸದೆ ವಾಪಸ್ಸಾಗಿದ್ದು ಸಂಜೆಯ ಸಂಧಾನ ಸಭೆಯ ನಂತರ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಈ ಶಾಸಕರುಗಳು ತಿಳಿಸಿದ್ದಾರೆ.

ಸಚಿವ ಡಾ. ಎಂ.ಸಿ ಸುಧಾಕರ್ ಶಾಸಕರಾದ ಕೊತ್ತೂರು ಮಂಜುನಾಥ್,ಮಾಲೂರಿನ ನಂಜೇಗೌಡ ಇವರುಗಳು ರಾಜೀನಾಮೆ ನೀಡಲು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರ ವಿಧಾನಸೌಧದ ಕಚೇರಿಗೆ ಬಂದಿದ್ದರು. ಸಭಾಧ್ಯಕ್ಷರು ಮಂಗಳೂರಿನಲ್ಲಿರುವ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಮಂಗಳೂರಿಗೆ ತೆರಳಲು ಈ ಮೂವರು ವಿಮಾನ ಟಿಕೆಟ್‌ನ್ನು ಬುಕ್ ಮಾಡಿದ್ದರಾದರೂ ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಇವರುಗಳ ಜತೆ ಮಾತನಾಡಿ ಸಂಜೆ ಬೆಂಗಳೂರಿಗೆ ಬರುವುದಾಗಿ ಹೇಳಿರುವುದರಿಂದ ಇವರ ಮಂಗಳೂರು ಪ್ರಯಾಣ ರದ್ದಾಯಿತು.

ವಿಧಾನ ಪರಿಷತ್ ಸದಸ್ಯರಾದ ನಜೀರ್‌ಅಹ್ಮದ್ ಹಾಗೂ ಅನಿಲ್‌ಕುಮಾರ್ ಅವರು ತಮ್ಮ ರಾಜೀನಾಮೆ ಪತ್ರದೊಂದಿಗೆ ಸಭಾಪತಿ ಕೊಡಿಗೆ ಬಂದಿದ್ದು, ರಾಜೀನಾಮೆ ಪತ್ರಗಳನ್ನೂ ಮಾಧ್ಯಮದವರಿಗೆ ಪ್ರದರ್ಶಿಸಿದ್ದರು. ಇನ್ನೇನು ರಾಜೀನಾಮೆ ಸಲ್ಲಿಸಬೇಕೆಂಬ ಸಂದರ್ಭದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಸೂಚನೆ ಮೇರೆಗೆ ರಾಜೀನಾಮೆ ಸಲ್ಲಿಸದೆ ವಾಪಸ್ಸಾಗಿದ್ದು, ರಾಜೀನಾಮೆ ಸಂಬಂಧದೊಡ್ಡ ಪ್ರಹಸನವೇ ನಡೆದಿದೆ.

ಸಚಿವ ಕೆ.ಹೆಚ್ ಮುನಿಯಪ್ಪಕುಟುಂಬದವರಿಗೆ ಟಿಕೆಟ್ ನೀಡಿಕೆ ವಿರೋಧಿಸಿ ನಾನು ಮತ್ತು ಅನಿಲ್‌ಕುಮಾರ್ ರವರು ರಾಜೀನಾಮೆ ಪತ್ರದೊಂದಿಗೆ ಸಭಾಪತಿ ಅವರನ್ನು ಭೇಟಿ ಮಾಡಿದ್ದೆವು. ಆದರೆ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಸಂಜೆ ಬೆಂಗಳೂರಿಗೆ ಬರಲಿದ್ದಾರೆ. ಅವರ ಜತೆ ಮಾತನಾಡಿ ನಂತರ ಎಲ್ಲವನ್ನೂ ತೀರ್ಮಾನ ಮಾಡುತ್ತೇವೆ ಹಾಗಾಗಿ ಮುಖ್ಯಮಂತ್ರಿಗ ಮಾತಿಗೆ ಬೆಲೆಕೊಟ್ಟು ರಾಜೀನಾಮೆ ಕೊಡದೆ ವಾಪಸ್ ಹೋಗುತ್ತಿದ್ದೇವೆ ಎಂದರು.

ನಾನೇ ನಜೀರ್‌ಅಹ್ಮದ್ ಅವರನ್ನು ರಾಜಕೀಯಕ್ಕೆ ಕರೆತಂದಿದ್ದೆ ಎಂಬ ಮುನಿಯಪ್ಪರವರ ಹೇಳಿಕೆಗೆ ಆಕ್ರೋಶ ಹೊರ ಹಾಕಿದ ನಜೀರ್‌ಅಹ್ಮದ್, 1991 ಲ್ಲಿ ನಾನು ಸಚಿವನಾಗಿದ್ದೆ. ಮುನಿಯಪ್ಪ ಅವರು ಪುಟುಕೋಸಿ ಬ್ಯಾಗ್ ಹಿಡಿದುಕೊಂಡು ನನ್ನ ಹಿಂದೆ ಬರುತ್ತಿದ್ದ ಎಂದು ಏಕವಚನದಲ್ಲೇ ಮುನಿಯಪ್ಪ ವಿರುದ್ಧ ವಾಗ್ದಾಳಿ ನಡೆಸಿ ಇದನ್ನು ಅವರು ಮೆರೆತಿದ್ದಾರೆಯೇ ಕೇಳಿ ಎಂದರು.

ಮುನಿಯಪ್ಪ ಕುಟುಂಬದವರಿಗೆ ಟಿಕೆಟ್ ನೀಡಿಕೆಗೆ ನಮ್ಮ ವಿರೋಧವಿದೆ. ರಾಜೀನಾಮೆ ತೀರ್ಮಾನ ಬ್ಲಾಕ್‌ಮೇಲ್ ಅಲ್ಲ ಯಾವುದೇ ಕಾರಣಕ್ಕೂ ಮುನಿಯಪ್ಪ ಕುಟುಂಬದವರಿಗೆ ಟಿಕೆಟ್ ನೀಡಬಾರದು ನೀಡಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ನಿಶ್ಚಿತ ಎಂದು ಮಾಲೂರಿನ ಕಾಂಗ್ರೆಸ್ ಶಾಸಕ ನಂಜೇಗೌಡ ಹೇಳಿದರು.

ವಿಧಾನ ಪರಿಷತ್ತಿನ ಸದಸ್ಯರಾದ ನಜೀರ್‌ಅಹ್ಮದ್ ಮತ್ತು ಅನಿಲ್‌ಕುಮಾರ್ ರಾಜೀನಾಮೆ ಪತ್ರ ಹಿಡಿದು ನಮ್ಮ ಕೊಠಡಿಗೆ ಬಂದಿದ್ದರು ಆದರೆ ಅವರು ರಾಜೀನಾಮೆ ನೀಡಿಲ್ಲ ರಾಜೀನಾಮೆ ಪತ್ರವನ್ನು ನಾನು ಒತ್ತಾಯ ಮಾಡಿ ಪಡೆಯಲು ಆಗಲ್ಲ ರಾಜೀನಾಮೆ ಕೊಟ್ಟರೆ ಸ್ವೀಕರಿಸುತ್ತೇನೆ ಇದುವರೆಗೂ ರಾಜೀನಾಮೆ ಕೊಟ್ಟಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿಕೆ ವಿಚಾರದಲ್ಲಿ ಕೋಲಾರ ಶಾಸಕರ ರಾಜೀನಾಮೆ ನೀಡಲು ಮುಂದಾಗಿರುವುದು ಅಚ್ಚರಿ ತಂದಿದೆ. ಎಲ್ಲವನ್ನೂ ಇಡೀ ರಾಜ್ಯವೇ ನೋಡಿದೆ. ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡಲಿ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ ಎಂದರು.

Related Articles

Back to top button