ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ:ಮತ್ತೆ ನಾಲ್ವರು ಪೊಲೀಸ್ ವಶಕ್ಕೆ?

Views: 79
ಕನ್ನಡ ಕರಾವಳಿ ಸುದ್ದಿ: ಮಂಗಳೂರು, ಕೋಟೆಕಾರು ಸಹಕಾರಿ ಬ್ಯಾಂಕ್‌ನ ಕೆ.ಸಿ.ರೋಡ್ ಶಾಖೆಯ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಇಬ್ಬರನ್ನು ತಮಿಳುನಾಡಿನಲ್ಲಿ ಮತ್ತಿಬ್ಬರನ್ನು ಮುಂಬಯಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರನ್ನು ಮಂಗಳೂರಿಗೆ ಕರೆತರಲು ಪೊಲೀಸ್ ತಂಡಗಳು ತಮಿಳುನಾಡು ಹಾಗೂ ಮುಂಬಯಿಗೆ ತೆರಳಿವೆ.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಈ ಕೃತ್ಯದಲ್ಲಿ ಸುಮಾರು 10ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರಿನಲ್ಲಿ ಕೃತ್ಯ ನಡೆಸಿದ ಬಳಿಕ ತಮಿಳುನಾಡಿಗೆ ಪರಾರಿಯಾಗಿದ್ದ ತಂಡದಲ್ಲಿ ಇಬ್ಬರು ಚಿನ್ನದೊಂದಿಗೆ ಪ್ರತ್ಯೇಕಗೊಂಡು ತಲೆಮರೆಸಿಕೊಂಡಿದ್ದರು. ಈಗ ಅವರಿಬ್ಬರನ್ನು ಚಿನ್ನ ಸಹಿತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಮುಂಬಯಿಯಲ್ಲಿ ಇಬ್ಬರು ಅಡಗಿದ್ದ ಮಾಹಿತಿ ಪೊಲೀಸರಿಗೆ ಮೊದಲೇ ಲಭಿಸಿತ್ತು. ಅದರಂತೆ ಕಾರ್ಯಾಚರಣೆ ಪ್ರಗತಿಯಲ್ಲಿತ್ತು. ಬುಧವಾರ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ವಶಕ್ಕೆ ಪಡೆದವರನ್ನು ವಿಚಾರಣೆ ನಡೆಸಿ ಬಳಿಕ ಬಂಧಿಸುವ ಸಾಧ್ಯತೆ ಇದೆ. ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಕಣ್ಣನ್ ಮಣಿ (35) ಎರಡು ದಿನಗಳ ಹಿಂದೆಯೇ ವಶಕ್ಕೆ ಪಡೆದಿದ್ದರೂ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಬಿಟ್ಟಿರಲಿಲ್ಲ. ಇದರ ಮಧ್ಯೆ ಮಂಗಳವಾರ ಸಂಜೆ ಉಳ್ಳಾಲ ಸಮೀಪದ ಅಲಂಕಾರ ಗುಡ್ಡೆಯಲ್ಲಿ ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರ ಗುಂಡೇಟಿಗೆ ಗುರಿಯಾಗಿದ್ದ ಬಳಿಕ ಕಣ್ಣನ್ ಮಣಿ ದರೋಡೆಯಲ್ಲಿ ಭಾಗಿಯಾದವರ ಬಗ್ಗೆ ಹಲವು ಮಾಹಿತಿಯನ್ನು ಬಾಯ್ದಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.