ಕುಂದಾಪುರ: ಬಿದ್ಕಲ್ ಕಟ್ಟೆಯಲ್ಲಿ ರಸ್ತೆ ಬದಿ ಮಲಗಿದ್ದ ದನ ಸಾಗಾಟ; ಇಬ್ಬರು ಕುಖ್ಯಾತ ಜಾನುವಾರು ಕಳ್ಳರ ಬಂಧನ

Views: 211
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಬಿದ್ಕಲ್ ಕಟ್ಟೆ ಪೇಟೆ ಸರ್ಕಲ್ ಬಳಿ ರಸ್ತೆ ಬದಿ ಮಲಗಿದ್ದ ದನವನ್ನು ವಾಹನವೊಂದರಲ್ಲಿ ತುಂಬಿಸಿ ಸಾಗಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ 19 ರಂದು ಈ ಕಳವು ಪ್ರಕರಣ ನಡೆದಿದ್ದು, ಆರೋಪಿಗಳು ರಸ್ತೆ ಬದಿ ಮಲಗಿದ್ದ ದನವನ್ನು ಕದ್ದೊಯ್ದಿದ್ದರು. ಈ ದೃಶ್ಯ ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ವೀಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಅಮೆಮ್ಮಾರ್ ಮಸೀದಿ ಬಳಿಯ ನಿವಾಸಿ ಇಮ್ರಾನ್ ಯಾನೆ ಕುಟ್ಟು(31)ಮತ್ತು ಮಂಗಳೂರು ತಾಲೂಕಿನ ಗಂಜಿಮಠ, ಮುಂದುಪುರ ಗ್ರಾಮದ ಮುಂಡೇವು ನಿವಾಸಿ ಇರ್ಷಾದ್(30) ಬಂಧಿತ ಆರೋಪಿಗಳು.
ಬಂಧಿತರಿಬ್ಬರೂ ಕುಖ್ಯಾತ ಜಾನುವಾರು ಕಳ್ಳರು. ಆರೋಪಿ ಇಮ್ರಾನ್ ಯಾನೆ ಕುಟ್ಟು ವಿರುದ್ಧ ಉಡುಪಿ ಜಿಲ್ಲೆಯ ಈ ಪ್ರಕರಣ ಸೇರಿದಂತೆ, ದಕ್ಷಿಣ ಕನ್ನಡ, ಕೊಡಗು, ಹಾಸನ ಜಿಲ್ಲೆ ಹಾಗೂ ಮಂಗಳೂರು ನಗರದಲ್ಲಿ ಒಟ್ಟು 35 ಪ್ರಕರಣಗಳು ದಾಖಲಾಗಿವೆ. ಇನ್ನು ಆರೋಪಿ ಇರ್ಷಾದ್ ಮೇಲೆ ಉಡುಪಿ ಜಿಲ್ಲೆಯ ಈ ಪ್ರಕರಣವೂ ಸೇರಿದಂತೆ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆ ಹಾಗೂ ಮಂಗಳೂರು ನಗರದಲ್ಲಿ ಒಟ್ಟು 14 ಪ್ರಕರಣಗಳು ದಾಖಲಾಗಿವೆ.






