ಧಾರ್ಮಿಕ

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ – ಬಸ್ರೂರು ವಲಯದ ನೂತನ ಕಚೇರಿ ಉದ್ಘಾಟನೆ – ಮಾಹಿತಿ ಕಾರ್ಯಾಗಾರ

Views: 185

ಕನ್ನಡ ಕರಾವಳಿ ಸುದ್ದಿ : ಅಭಿವೃದ್ಧಿ ಹೊಂದುತ್ತಿರುವ ಶ್ರೀ ಉಳ್ಳೂರು ಕಾರ್ತಿಕೇಯ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ದಿನವೂ ವಿವಿಧೆಡೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಕ್ಷೇತ್ರಾಭಿವೃದ್ಧಿಯ ಅಂಗವಾಗಿ 18 ಲಕ್ಷ ರೂ. ಗಳಿಗೂ ಹೆಚ್ಚು ವೆಚ್ಚದಲ್ಲಿ ಸೌಧವನ್ನು ನಿರ್ಮಿಸಲಾಗಿದೆ. ಇಲ್ಲಿ ಧಾರ್ಮಿಕ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿರಬೇಕು ಎಂಬುದು ದೇವಳ ಸಮಿತಿಯ ಬಯಕೆ. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಬಸ್ರೂರು ದ್ರಾವಿಡ ಬ್ರಾಹ್ಮಣ ಪರಿಷತ್ ಗೆ ಅನುಕೂಲ ಕಲ್ಪಿಸಲು ಅದರ ಕಚೇರಿಗಾಗಿ ಇಲ್ಲಿ ಸ್ಥಳ ಒದಗಿಸಲಾಗಿದೆ. ಪರಿಷತ್ ನವರು ಇಲ್ಲಿ ಧಾರ್ಮಿಕ ಚಟುವಟಿಕೆಗಳು, ದೇವಳ ಅಭಿವೃದ್ಧಿ ಹಾಗೂ ಭಕ್ತರಿಗೆ ಅನುಕೂಲಕರವಾದ ಕಾರ್ಯಗಳನ್ನು ನಿರಂತರವಾಗಿ ನಡೆಸುವಂತಾಗಲಿ ಎಂದು ಶ್ರೀ ಉಳ್ಳೂರು ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸುಬ್ರಾಯ ಉಡುಪ ಹೇಳಿದರು.

ದೇವಾಲಯ ಹೊರ ಪ್ರಾಕಾರದ ಮಹಡಿಯಲ್ಲಿ ದ್ರಾವಿಡ ಬ್ರಾಹ್ಮಣ ಪರಿಷತ್ ನ ಬಸ್ರೂರು ವಲಯದ ನೂತನ ಕಚೇರಿಯನ್ನು ದೀಪ ಬೆಳಗಿ ಉದ್ಘಾಟಿಸಿ ಅವರು ಶುಭ ಕೋರಿದರು.

ಮುಖ್ಯ ಅಭ್ಯಾಗತ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ನ ಗೌರವಾಧ್ಯಕ್ಷ ಶುಭಚಂದ್ರ ಹತ್ವಾರ್ ಮಾತನಾಡಿ, ವಲಯದವರಿಗೆ ದಾಖಲೆಗಳು, ಪುಸ್ತಕ ಇತ್ಯಾದಿಗಳನ್ನು ಕಾಪಿಡಲು ಕಚೇರಿ ಒದಗಿಸಿಕೊಟ್ಟ ದೇವಳ ಸಮಿತಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ, ಜನರಿಗೆ ಅನುಕೂಕರವಾದ ಆರೋಗ್ಯ ರಕ್ಷಣೆ ಹಾಗೂ ಧನ – ಕನಕ ಸಂರಕ್ಷಣೆ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ನಡೆಸುತ್ತಿರುವುದನ್ನು ಅವರು ಶ್ಲಾಘಿಸಿದರು.

ವಿಪ್ರವಾಣಿ ಸಂಪಾದಕ ಪ್ರೊ. ಶಂಕರ ರಾವ್ ಕಾಳಾವರ ಮಾತನಾಡಿ, ಪರಿಷತ್ ನ ಮುಖವಾಣಿ ವಿಪ್ರವಾಣಿ ಪತ್ರಿಕೆಗೆ ಸ್ಪಷ್ಟ ರೂಪುರೇಷೆ ನೀಡುವ ಮಹತ್ಕಾರ್ಯದಲ್ಲಿ ಬಸ್ರೂರು ವಲಯದ ಭಾಸ್ಕರ ಉಡುಪರು ಸಲ್ಲಿಸಿದ ಸೇವೆಯನ್ನು ಸ್ಮರಿಸಿಕೊಂಡರು.

ಪರಿಷತ್ ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ, ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಸಂಧ್ಯಾ ಉಡುಪ, ಬಸ್ರೂರು ವಲಯ ಮಹಿಳಾ ವೇದಿಕೆ ಅಧ್ಯಕ್ಷೆ ಪ್ರತಿಮಾ ಹೆಬ್ಬಾರ್ ಮಾತನಾಡಿದರು.

ಸಭಾಧ್ಯಕ್ಷತೆ ವಹಿಸಿದ್ದ ಬಸ್ರೂರು ವಲಯಾಧ್ಯಕ್ಷ ಕೇಶವ ಅಡಿಗ ಸ್ವಾಗತಿಸಿದರು. ವಲಯ ಕಚೇರಿಗಾಗಿ ಕೊಠಡಿ ನೀಡಿದ ದೇವಳ ಸಮಿತಿಗೆ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು.

ದೇವಳ ಸಮಿತಿಯ ಸದಸ್ಯರಾದ ಶ್ರೀನಿವಾಸ ಉಡುಪ, ಶಿವರಾಮ ಉಡುಪ, ರಾಘವೇಂದ್ರ ಉಡುಪ, ವಿದ್ವಾನ್ ಮಾಧವ ಅಡಿಗ, ವಲಯ ಖಜಾಂಚಿ ಪ್ರಶಾಂತ್ ಭಟ್, ಯುವ ವಿಭಾಗದ ಅಧ್ಯಕ್ಷ ಶಿವರಾಜ ಉಡುಪ, ಮಹಿಳಾ ವೇದಿಕೆ ಉಪಾಧ್ಯಕ್ಷೆ ಪದ್ಮಾವತಿ ಉಡುಪ ಇನ್ನಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾದ ಮನೆಮದ್ದು – ಆಯುರ್ವೇದ ಔಷಧ ಮಾಹಿತಿ – ಪ್ರಾತ್ಯಕ್ಷಿಕೆ ಕಾರ್ಯಾಗಾರದಲ್ಲಿ ಡಾ. ರೂಪಶ್ರೀ ಮರವಂತೆ ಹಾಗೂ ಶೇರ್ ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್ ಬಗ್ಗೆ ಮಾಹಿತಿ ಒದಗಿಸುವ ಕಾಸು – ಕುಡಿಕೆ ವಿಚಾರ ವಿನಿಮಯದ ಮನಿ ಮಾತು ಕಾರ್ಯಾಗಾರದಲ್ಲಿ ಬಂಡೀಮಠ ಶ್ರೀಧರ ಭಟ್ ಮಾಹಿತಿ ನೀಡಿದರು. ಅಂಚೆ ವಿಮೆ, ಆರೋಗ್ಯ ವಿಮೆ, ಪಿ ಎಂ ವಯವಂದನ ಯೋಜನೆಗಳ ಬಗ್ಗೆ ಅಂಚೆ ಅಧಿಕಾರಿಗಳು ಮಾಹಿತಿ ನೀಡಿದರು. ಆಸಕ್ತರು ಸ್ಥಳದಲ್ಲೇ ವಿಮೆ ಮಾಡಿಸುವ ಸೌಲಭ್ಯ ಕಲ್ಪಿಸಲಾಗಿತ್ತು.

ಕಾರ್ಯದರ್ಶಿ ಸತ್ಯನಾರಾಯಣ ಅಡಿಗ ಕಾರ್ಯಕ್ರಮ ನಿರೂಪಿಸಿ, ಮಹಿಳಾ ವೇದಿಕೆ ಅಧ್ಯಕ್ಷೆ ಪ್ರತಿಮಾ ಹೆಬ್ಬಾರ್ ವಂದಿಸಿದರು. ಸಭೆಗೆ ಮುನ್ನ ಗಣಹೋಮ, ಶ್ರೀ ಕಾರ್ತಿಕೇಯ ಸುಬ್ರಹ್ಮಣ್ಯ ದೇವರಿಗೆ ಪವಮಾನ ಕಲಶಾಭಿಷೇಕ ನಡೆಸಲಾಗಿತ್ತು. ಬಸ್ರೂರು ವಿಪ್ರ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು.

Related Articles

Back to top button