ಕುಂದಾಪುರ ತಾಲೂಕಿನ ನಕ್ಸಲ್ ತೊಂಬಟ್ಟು ಲಕ್ಷ್ಮೀ ಇಂದು ಶರಣಾಗತಿ

Views: 369
ಕನ್ನಡ ಕರಾವಳಿ ಸುದ್ದಿ: ಕರಾವಳಿ-ಮಲೆನಾಡು ಭಾಗದ ನಕ್ಸಲ್ ಚಟುವಟಿಕೆಗಳಿಂದ ಹಠಾತ್ತನೆ ನಾಪತ್ತೆಯಾಗಿ ಆಂಧ್ರ ಪ್ರದೇಶದಲ್ಲಿ ನೆಲೆಸಿದ್ದರೆಂದು ಹೇಳಲಾಗುತಿದ್ದ ಕುಂದಾಪುರ ತಾಲೂಕು ಅಮಾಸೆಬೈಲು ಸಮೀಪದ ತೊಂಬಟ್ಟಿನ ನಿವಾಸಿ ಲಕ್ಷ್ಮೀ ಭಾನುವಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಜಿಲ್ಲಾಧಿಕಾರಿ ಮುಂದೆ ಶರಣಾಗುವರು ಎಂದು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಸದಸ್ಯ ಕೆ.ಪಿ.ಶ್ರೀಪಾಲ್ ತಿಳಿಸಿದ್ದಾರೆ.ಕಾಡಿನಲ್ಲಿದ್ದು ನಾಡಿನ ಜನಕ್ಕಾಗಿ ಬಂದೂಕಿನ ಹೋರಾಟದ ಮೊರೆ ಹೋಗಿದ್ದ ಉಡುಪಿ ಮೂಲದ ಲಕ್ಷ್ಮೀ ಇಂದು ಕೋವಿ ಕೆಳಗಿಳಿಸಿ ಶರಣಾಗಲಿದ್ದಾರೆ.
ಕಾಡಂಚಿನ ಜನರ ಪರವಾಗಿ ಬಂದೂಕು ಹಿಡಿದು ಹೋರಾಟ ನಡೆಸುತ್ತಿದ್ದ ತೊಂಬಟ್ಟು ಲಕ್ಷ್ಮೀ ಶರಣಾಗುವ ಮೂಲಕ ಕರ್ನಾಟಕದಲ್ಲಿ ಮುಖ್ಯ ವಾಹಿನಿಗೆ ಬರಲಿದ್ದಾಳೆ.ಆಕೆಯ ಮೇಲೆ ಶಂಕರನಾರಾಯಣ ಮತ್ತು ಅಮಾಸೆಬೈಲ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳಿವೆ.
ಲಕ್ಷ್ಮೀ ಪ್ರಸ್ತುತ ಆಂಧ್ರ ಪ್ರದೇಶದಲ್ಲಿ ಗಂಡನ ಜತೆ ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾಳೆ. ಗಂಡ ಕೂಡ ನಕ್ಸಲ್ ಆಗಿದ್ದು, ಮುಖ್ಯವಾಹಿನಿಗೆ ಬಂದಿದ್ದರು ಎಂಬ ಮಾಹಿತಿಯೂ ಇದೆ.
ಲಕ್ಷ್ಮೀ ಸುಮಾರು 15 ವರ್ಷಗಳಿಂದ ಕುಟುಂಬದವರಿಂದ ಸಂಪರ್ಕ ಕಳೆದುಕೊಂಡಿದ್ದಾಳೆ. ಭೂಗತವಾಗಿ ನಕ್ಸಲ್ ಚಟುವಟಿಕೆಯಲ್ಲಿ ಇದ್ದಳು ಎಂಬ ಮಾಹಿತಿಯಿದೆ.