ಕಾರು ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ: ಮೂವರು ಮಕ್ಕಳು ಸೇರಿ ನಾಲ್ವರ ಸಾವು

Views: 54
ಚಿತ್ರದುರ್ಗ:ಅತಿ ವೇಗವಾಗಿ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದು ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ದುರ್ಘಟನೆ ಚಳ್ಳಕೆರೆ ಬಳಿ ಇಂದು ಮುಂಜಾನೆ ನಡೆದಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ದಂಡಮ್ಮಹಳ್ಳಿಯ ಒಂದೇ ಕುಟುಂಬದ ಸಿಂಧು ಶ್ರೀ(2) ಅಯ್ಯಳಪ್ಪ (5 ತಿಂಗಳು), ರಕ್ಷಾ (3 ತಿಂಗಳು) ಹಾಗೂ ಲಿಂಗಪ್ಪ (26)ಮೃತಪಟ್ಟವರು.ಗಾಯಗೊಂಡಿರುವ ಯಲ್ಲಮ್ಮ (30), ಮಲ್ಲಮ್ಮ (2೦) ನಾಗಪ್ಪ (35) ಸೇರಿ ಮೂವರನ್ನು ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ದೇವದುರ್ಗ ತಾಲೂಕಿನ ದಂಡಮ್ಮಹಳ್ಳಿಯ ಮೃತರು ಸೇರಿ ಒಂದೇ ಕುಟುಂಬದ ಆರು ಮಂದಿ ಕಾರಿನಲ್ಲಿ ನಸುಕಿನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದ ಕಾರು ಮಾರ್ಗ ಮಧ್ಯದ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಬಳಿ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇನ್ನುಳಿದ ಮೂವರು ಗಾಯಗೊಂಡಿದ್ದಾರೆ. ಚಾಲಕನ ನಿದ್ರೆ ಮಂಪರಿನಲ್ಲಿ ನಸುಕಿನ ವೇಳೆ ನಡೆದಿರುವ ಘಟನೆ ಇದಾಗಿದೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಪಿಎಸ್‌ಐ ಶಿವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಳ್ಳಕೆರೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.