ಜನಮನ

ಕರಾವಳಿಯಲ್ಲಿ ಇನ್ನೂ ಮೂರು ದಿನ ಮಳೆ ಮುಂದುವರಿಯುವ ಸಾಧ್ಯತೆ:ಹವಾಮಾನ ಇಲಾಖೆ ಮುನ್ಸೂಚನೆ

Views: 31

ಕನ್ನಡ ಕರಾವಳಿ ಸುದ್ದಿ: ಕರಾವಳಿ ಸೇರಿ ರಾಜ್ಯದ ವಿವಿಧೆಡೆ ಗುರುವಾರದಿಂದ ಮೂರು ದಿನ ಭಾರಿ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿಯ ಮೂರೂ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಿಗೆ ಗುರುವಾರ ಮತ್ತು ಶುಕ್ರವಾರ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಯ ಒಂದೆರಡು ಕಡೆ ಇದೇ 8ರವರೆಗೆ ನಿರಂತರ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಂಭವವಿದೆ. ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿಯೊಂದಿಗೆ ಇದೇ 11ರವರೆಗೆ ಭಾರಿ ಮಳೆ ಮುಂದುವರಿಯುವ ಸಾಧ್ಯತೆಯಿದೆ.

ಉಡುಪಿ ಜಿಲ್ಲಾದ್ಯಂತ ಬುಧವಾರ ಬೆಳಿಗ್ಗೆ ಮತ್ತು ರಾತ್ರಿ ವೇಳೆ ಸಾಧಾರಣ ಮಳೆಯಾಗಿತ್ತು. ಹಗಲಿನಲ್ಲಿ ಮೋಡ ಕವಿದ ವಾತಾವರಣವಿತ್ತು. ಕುಂದಾಪುರ, ಬೈಂದೂರು ತಾಲೂಕಿನ ಗ್ರಾಮಾಂತರದಲ್ಲಿ ಮುಂಜಾನೆ ಭಾರೀ ಮಳೆಯಾಗಿದೆ. ಸಂಜೆ ವೇಳೆ ಉಡುಪಿ, ಮಣಿಪಾಲ, ಆತ್ರಾಡಿ ಹಿರಿಯಡಕ, ಮಲ್ಪೆ ಕಟಪಾಡಿ, ಉಚ್ಚಿಲ ಸಹಿತ ಬ್ರಹ್ಮಾವರ, ಕಾಪು, ಕುಂದಾಪುರ, ಹೆಬ್ರಿ, ಕಾರ್ಕಳ ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ.

ಕುಂದಾಪುರ ಗ್ರಾಮಾಂತರ ಪ್ರದೇಶಗಳಾದ ತಲ್ಲೂರು, ಹೆಮ್ಮಾಡಿ, ಗಂಗೊಳ್ಳಿ, ಕಂಚುಗೋಡು, ತ್ರಾಸಿ, ನೇರಳಕಟ್ಟೆ ಹಾಗೂ ಗುಲ್ವಾಡಿ ಸಹಿತ ವಿವಿಧೆಡೆ ಉತ್ತಮ ಮಳೆಯಾಗಿದೆ. ಗಂಗೊಳ್ಳಿ ಲೈಟ್‌ಹೌಸ್ ಹಾಗೂ ಕಂಚುಗೋಡು ಕರಾವಳಿ ಭಾಗದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಕಡಲ್ಕೊರೆತ ಭೀತಿ ಎದುರಾಗಿದೆ.

ಕುಂದಾಪುರದ ಕೊರ್ಗಿಯ ಮನೆಯೊಂದರ ಮೇಲೆ ಮರ ಬಿದ್ದು ಸುಮಾರು 80,000 ರೂ. ನಷ್ಟ ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಕುಂದಾಪುರ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 135.6 ಮಿ.ಮೀ. ಮಳೆಯಾಗಿದೆ.

 

Related Articles

Back to top button
error: Content is protected !!