ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಇನ್ನಿಲ್ಲ

Views: 108
ಕನ್ನಡ ಕರಾವಳಿ ಸುದ್ದಿ: ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಅವರು ನಿಧನ ಹೊಂದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.ಇಂದು ಬೆಳಿಗ್ಗೆ (ಜನವರಿ 15) ಬೆಳಿಗ್ಗೆ 9:45ಕ್ಕೆ ನಿಧನ ಹೊಂದಿದ್ದಾರೆ.
ಅವರು ಕಳೆದ ಕೆಲ ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ವಿಜಿ ಅವರಿಗೆ ಶ್ವಾಸಕೋಶದ ಸಮಸ್ಯೆ ಎದುರಾಗಿತ್ತು. ವಿಜಿ ಅವರ ಅಗಲಿಕೆಗೆ ಅವರ ಕುಟುಂಬದವರು ಆಪ್ತರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಅವರಿಗೆ ಇಬ್ಬರು ಮಕ್ಕಳಿದ್ದರು. ನಾಳೆ (ಜನವರಿ 16) ಬೆಳಿಗ್ಗೆ 10 ರಿಂದ 12 ಗಂಟೆಗೆ ಅಷ್ಟ್ರಲ್ಲಿ ಚಾಮರಾಜಪೇಟೆಯ ಟಿ ಆರ್ ಮಿಲ್ ಬಳಿ ಬರುವ ಚೀತಾಗಾರದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ.
ಚಂದನವನದ ಹಿರಿಯ ನಟ ಸರಿಗಮ ವಿಜಿ ಅವರು ರಂಗಭೂಮಿ, ಸಿನಿಮಾ, ಸೀರಿಯಲ್.. ಹೀಗೆ ವಿವಿಧ ಕ್ಷೇತ್ರಗಳಲ್ಲಿ ಬಣ್ಣ ಹಚ್ಚಿ, ಸುಮಾರು 60 ವರ್ಷಗಳ ಕಾಲ ಕಲಾಸೇವೆ ಮಾಡಿದಂತಹ ಕಲಾಸಂತ. ಅಂದಹಾಗೆ ಇವರ ಹೆಸರು ವಿಜಯ್ ಕುಮಾರ್
ಸಂಸಾರದಲ್ಲಿ ಸರಿಗಮ ಅನ್ನೋ ನಾಟಕವನ್ನು ಅವರೇ ನಿರ್ದೇಶಿಸಿ, ಪ್ರಧಾನ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಅದೂ 1390 ಬಾರಿ ಪ್ರದರ್ಶನಗೊಂಡ ನಾಟಕ ಅದ್ದರಿಂದ ಅವರು ಕನ್ನಡಿಗರ ಜನಮಾನಸದಲ್ಲಿ ಸರಿಗಮ ವಿಜಿ ಆಗಿಬಿಟ್ಟರು. ಅಷ್ಟರ ಮಟ್ಟಿಗೆ ಅವರ ಹಾಸ್ಯ ಪ್ರಜ್ಞೆ ಎಲ್ಲರನ್ನು ಮೋಡಿ ಮಾಡುತ್ತಿತ್ತು.
1965ರಿಂದ 2024ರ ವರೆಗೆ ಸರಿಗಮ ವಿಜಿ ಅವರು ಹಗಲಿರುಳು ತಮ್ಮ ಇಡೀ ಜೀವಮಾನವನ್ನ ಕಲೆಗಾಗಿಯೇ ಅರ್ಪಿಸಿಕೊಂಡರು. ಹಾಗಾಗಿಯೇ ಅವ್ರು ಚಿತ್ರರಂಗದ ಶಕ್ತಿಯಾದರು. ರಂಗಕರ್ಮಿಗಳ ಪಾಲಿಗೆ ಗುರುವಾದರು. ಕಿರುತೆರೆ ಪಾಲಿನ ಮಾಸ್ಟರ್ ಆದ್ರು. 1975ರಲ್ಲಿ ಬೆಳುವಲದ ಮಡಿಲಲ್ಲಿ ಚಿತ್ರದಿಂದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದಂತಹ ಸರಿಗಮ ವಿಜಿ ಅವರು, 2018ನೇ ಇಸವಿಯ ವೇಳೆಗೆ ಬರೋಬ್ಬರಿ 269 ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು.
ಇದೀಗ 500 ಸಿನಿಮಾಗಳ ಗಡಿ ದಾಟಿದ್ರೂ ಅಚ್ಚರಿಯಿಲ್ಲ. ಮದುವೆ ಮಾಡಿ ನೋಡು, ಬೆಳುವಲದ ಮಡಿಲಲ್ಲಿ, ಕಪ್ಪು ಕೋಲ, ಪ್ರತಾಪ್, ಮನಮೆಚ್ಚಿದ ಸೊಸೆ, ಕೆಂಪಯ್ಯ IPS, ಗೋಲ್ಡ್ ಮೆಡಲ್, ಜಗತ್ ಕಿಲಾಡಿ, ಯಮಲೋಕದಲ್ಲಿ ವೀರಪ್ಪನ್, ದುರ್ಗಿ, ಸ್ವಾರ್ಥರತ್ನ ಚಿತ್ರಗಳು ಸರಿಗಮ ವಿಜಿ ಅವರ ಒಂದಷ್ಟು ಆಲ್ ಟೈಂ ಹಿಟ್ ಸಿನಿಮಾಗಳು.
ಬರೀ ನಟನೆಗಷ್ಟೇ ಸೀಮಿತಗೊಳ್ಳದ ಸರಿಗಮ ವಿಜಿ ಅವರು 80ಕ್ಕೂ ಅಧಿಕ ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಕಿರುತೆರೆ ಲೋಕದಲ್ಲಿ ಸಾಲು ಸಾಲು ಧಾರಾವಾಹಿಗಳಿಗೆ ಕೆಲಸ ಮಾಡಿರೋ ಇವರು, ಸುಮಾರು 2400ಕ್ಕೂ ಅಧಿಕ ಸೀರಿಯಲ್ ಎಪಿಸೋಡ್ ಗಳನ್ನು ನಿರ್ದೇಶಿಸಿದ್ದಾರೆ. ಒಂದಷ್ಟು ಶೋಗಳಲ್ಲೂ ಭಾಗಿಯಾಗಿದ್ದ ಇವರು, ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ಗೆ ಜ್ಯೂರಿಯಾಗಿ ಮಿಂಚಿದ್ದರು.