ಸಾಮಾಜಿಕ

ಎಸ್. ತಿಮ್ಮಪ್ಪ ಶೆಟ್ಟಿಗಾರ್ ಮುದ್ರಾಡಿಯವರಿಗೆ “ಪದ್ಮಶಾಲಿ ಸಾಮಾಜಿಕ ನಾಯಕತ್ವ ಪ್ರಶಸ್ತಿ” ಪ್ರದಾನ

Views: 210

ಕನ್ನಡ ಕರಾವಳಿ ಸುದ್ದಿ: ಕೀರ್ತಿಶೇಷ ದಯಾನಂದ ಕೊಂಚಾಡಿ ಹಾಗೂ ವಿಮಲಾ.ಡಿ ಕೊಂಚಾಡಿಯವರಿಂದ ಪ್ರಾಯೋಜಿತ 2024-25 ಸಾಲಿನ ಪದ್ಮಶಾಲಿ ‘ಸಾಮಾಜಿಕ ನಾಯಕತ್ವ ಪ್ರಶಸ್ತಿ’ಯನ್ನು ಎಸ್. ತಿಮ್ಮಪ್ಪ ಶೆಟ್ಟಿಗಾರ್ ಮುದ್ರಾಡಿಯವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಜುಲೈ 20ರಂದು ಸುರತ್ಕಲ್ ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ಮತ್ತು ಪುರಾತನ ಶ್ರೀ ಮಾರಿಯಮ್ಮ  ದೇವಸ್ಥಾನದ ತ್ರೈರೂಪಿಣಿ  ರಂಗಮಂಟಪದಲ್ಲಿ ನಡೆದ ದ.ಕ.ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ.) ಮಂಗಳೂರು ಮತ್ತು ದ.ಕ. ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ (ರಿ.) ಉಡುಪಿ ಇದರ  79ನೆಯ ವಾರ್ಷಿಕ ಮಹಾಸಭೆಯಲ್ಲಿ ಶ್ರೀ ಎಸ್. ತಿಮ್ಮಪ್ಪ ಶೆಟ್ಟಿಗಾರ್ ಮುದ್ರಾಡಿಯವರು ಪತ್ನಿಯೊಂದಿಗೆ ಪ್ರಶಸ್ತಿ ಸ್ವೀಕರಿಸಿದರು. ಉಡುಪಿ ತಾಲೂಕಿನ ಸಾಲಿಕೇರಿಯ ಕೀರ್ತಿಶೇಷರಾದ ಗಣಪ ಶೆಟ್ಟಿಗಾರ್ ಮತ್ತು ಜಲಜಾಕ್ಷಿ ಶೆಟ್ಟಿಗಾರರ ಸುಪುತ್ರರಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಉಪ್ಪಿನಕೋಟೆ ಮತ್ತು ಬ್ರಹ್ಮಾವರದಲ್ಲಿ ಪೂರೈಸಿ, ಆರಂಭದಲ್ಲಿ ಇವರು ರಿಕ್ಷಾ ಚಾಲನೆಯಿಂದ ವೃತ್ತಿ ಆರಂಭಿಸಿ, ಗ್ರಾಮಲೆಕ್ಕಿಗರಾಗಿ ಸರಕಾರಿ ಸೇವೆಗೆ ಸೇರ್ಪಡೆಗೊಂಡು ಸೇವಾ ಭಡ್ತಿ ಪಡೆಯುತ್ತಾ, ಉಪ ತಹಶೀಲ್ದಾರರ ಹುದ್ದೆಯನ್ನು ಪಡೆದು 39 ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿದ್ದಾರೆ.

ನಿಷ್ಪಕ್ಷಪಾತವಾದ ತಮ್ಮ ಸೇವಾ ಕೈಂಕರ್ಯದಿಂದ  ಸಾರ್ವಜನಿಕರು, ಅಧಿಕಾರಿ ವರ್ಗದಿಂದ ಜನಪ್ರತಿನಿಧಿಗಳಿಂದ ಪ್ರಶಂಸಿಸಲ್ಪಟ್ಟಿರುತ್ತಾರೆ.

ಮುದ್ರಾಡಿಯವರು  ಭಜನಾ ಮಂಡಳಿಯ ಅಧ್ಯಕ್ಷರಾಗಿ ದೇವಭಕ್ತಿಯನ್ನು ಸಾರ್ವಜನಿಕರಲ್ಲಿ ಜಾಗೃತಿ ಗೊಳಿಸಿದ್ದಾರೆ. ಬ್ರಹ್ಮಾವರದಲ್ಲಿ ಗ್ರಾಮಲೆಕ್ಕಿಗರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮುದ್ರಾಡಿಯ ಗಣೇಶೋತ್ಸವ ಸಮಿತಿಯಲ್ಲಿ ತಮ್ಮ ನಿಸ್ವಾರ್ಥ ಸೇವೆಯು ಸಾರ್ವಜನಿಕರಿಂದ ಪ್ರಶಂಸಿಸಲ್ಪಟ್ಟಿದ್ದಾರೆ.

ಸ್ವಕ್ಷೇತ್ರವಾದ ಮುದ್ರಾಡಿಯಲ್ಲಿ ಸಾಹಿತಿಗಳಾದ ಅಂಬಾತನಯರವರ ಮಾರ್ಗದರ್ಶನದಲ್ಲಿ ಮುದ್ರಾಡಿ ಶೆಟ್ಟಿಗಾರ್ ಸಮಾಜ ಸೇವಾ ಸಂಘವನ್ನು ಸ್ಥಾಪಿಸಿ ಆರು ವರ್ಷಗಳ ಅಧ್ಯಕ್ಷರಾಗಿ,ಮೂರು ವರ್ಷಗಳ ಕಾಲ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿ ರಚನಾತ್ಮಕ ಕಾರ್ಯಗಳನ್ನು ರಚಿಸಿದಲ್ಲದೆ, ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ  ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷರಾಗಿ ತಮ್ಮ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದರು.

ವಿದ್ಯಾವರ್ಧಕ ಸಂಘದ ಅಧೀನ ನಿಟ್ಟೆಯ ರಾಮಕೃಷ್ಣ ವಿದ್ಯಾರ್ಥಿ ನಿಲಯಕ್ಕೆ ಸಂಬಂಧಿಸಿದ ಭೂದಾಖಲೆಗಳನ್ನು ಕಚೇರಿ ಸ್ಥಾನಗಳಿಂದ ವಿಹಿತರೀತಿಯಿಂದ ಸಂಗ್ರಹಿಸಿ ಒದಗಿಸಿದ ತಾವು ಅಭಿಲೇಖ ವಿಚಕ್ಷಣರು. ಸರಕಾರಿ ಸೇವೆಯಲ್ಲಿ ಗಳಿಸಿದ ತಮ್ಮ ಅನುಭವಾಮೃತವನ್ನು ಸಂಘ ಕಾರ್ಯಕ್ಕಾಗಿ ವಿನಿಯೋಗಿಸಿ ಕೃತಕೃತ್ಯರಾಗಿ ಜನಾದರಣೆಗೆ ಪಾತ್ರರಾಗಿದ್ದಾರೆ.

ಭಜನೆಯ ಭಜಕರಾಗಿ, ನಾಟಕದ ನಟರಾಗಿ, ಯಕ್ಷಗಾನದ ವೇಷಧಾರಿಯಾಗಿ ಉತ್ತಮ ಹವ್ಯಾಸಗಳಲ್ಲಿ ಸಮಯವನ್ನು ಸದ್ವಿನಿಯೋಗಗೊಳಿಸುತ್ತಿರುವ ಸದಾಚಾರ ಸಂಪನ್ನರು ಆಗಿರುವ ಇವರು ಈಗಲೂ ಸಕ್ರಿಯರಾಗಿದ್ದಾರೆ.

Related Articles

Back to top button