ಉಡುಪಿ ಶೌಚಾಲಯದಲ್ಲಿ ವಿಡಿಯೋ ಪ್ರಕರಣ: ಸಿಐಡಿ ಚಾರ್ಜ್ ಶೀಟ್‌ನಲ್ಲಿ ಉಲ್ಹೇಖವೇನು ?

Views: 101
ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ರೆಕಾರ್ಡ್ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಅಧಿಕಾರಿಗಳು ಉಡುಪಿಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ವರದಿಗಳ ಪ್ರಕಾರ, ತನಿಖೆಯಲ್ಲಿ ಮೂವರು ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಮೊಬೈಲ್ ಮೂಲಕ ತಮ್ಮ ಸಹಪಾಠಿಯ ವಿಡಿಯೋ ಚಿತ್ರೀಕರಣ ಮಾಡಿರುವುದು ದೃಢಪಟ್ಟಿದೆ ಎಂದು ಸಿಐಡಿ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದೆ.
ಆರೋಪಿ ವಿದ್ಯಾರ್ಥಿನಿಯರು ತಮ್ಮ ಗೆಳತಿಯ ವಿಡಿಯೋ ಮಾಡಲು ಹೋಗಿ ಬೇರೆ ಯುವತಿಯರ ಖಾಸಗಿ ವಿಡಿಯೋ ಮಾಡಿದ್ದರು. ಬಳಿಕ ಸಾಕ್ಷ್ಯ ನಾಶಮಾಡಲು ಮೊಬೈಲ್‌ನಲ್ಲಿದ್ದ ವಿಡಿಯೋ ಡಿಲಿಟ್ ಮಾಡಿರುವುದು ತನಿಖೆಯಲ್ಲಿ ಸಾಭೀತಾಗಿದೆ ಎಂದು ಸಿಐಡಿ ಅಧಿಕಾರಿಗಳು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ
ಚಾರ್ಜ್ ಶೀಟ್‌ನಲ್ಲಿ ಏನಿದೆ?
ಆರೋಪಿತ ವಿದ್ಯಾರ್ಥಿನಿಯರು ತಮಾಷೆ ಅಥವಾ ಪ್ರ್ಯಾಂಕ್ ವಿಡಿಯೋ ಮಾಡುವ ಹವ್ಯಾಸ ಹೊಂದಿದ್ದರು. ಜುಲೈ 18, 2023ರಂದು ಕಾಲೇಜಿನ ಶೌಚಾಲಯದಲ್ಲಿ ತಮ್ಮ ಗೆಳತಿಯ ವಿಡಿಯೋ ಮಾಡಿದ್ದರು. ಆದರೆ, ಅವರು ರೆಕಾರ್ಡ್ ಮಾಡಿದ ವಿಡಿಯೋದಲ್ಲಿ ಗೆಳತಿಯ ಬದಲಾಗಿ ಸಹಪಾಠಿ ಯುವತಿ ಇರುವುದು ಗೊತ್ತಾಗಿದೆ.
ಕೂಡಲೇ ವಿಡಿಯೋ ಡಿಲಿಟ್ ಮಾಡಿದ ವಿದ್ಯಾರ್ಥಿನಿಯರು ಸಂತ್ರಸ್ತೆಗೆ ತಪ್ಪಾಗಿ ವಿಡಿಯೋ ಮಾಡಿರುವ ವಿಚಾರ ತಿಳಿಸಿ ಕ್ಷಮೆ ಯಾಚಿಸಿದ್ದಾರೆ. ಬಳಿಕ ಈ ವಿಷಯ ಕಾಲೇಜಿನ ಆಡಳಿತ ಮಂಡಳಿಗೆ ಗೊತ್ತಾಗಿದೆ. ಆಡಳಿತ ಮಂಡಳಿ ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಿದಾಗ ಅವರು ವಿಡಿಯೋ ಮಾಡಿರುವುದನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿದ್ದಾರೆ.
ವಿದ್ಯಾರ್ಥಿನಿಯರು ಆಡಳಿತ ಮಂಡಳಿಗೆ ಕೊಟ್ಟಿರುವ ಕ್ಷಮಾಪಣಾ ಪತ್ರದ ಬರಹಕ್ಕೂ ಅವರ ಕೈ ಬರಹಕ್ಕೂ ತಾಳೆಯಾಗುತ್ತಿದೆ ಎಂದು ಎಫ್‌ಎಸ್‌ಎಲ್ ವರದಿ ದೃಢೀಕರಿಸಿದೆ. ಕಾಲೇಜಿನ ಸಿಸಿಟಿವಿ ವಿಡಿಯೋ ಕೂಡ ವಿದ್ಯಾರ್ಥಿನಿಯರ ಮೇಲಿರುವ ಆರೋಪಕ್ಕೆ ಪೂರಕವಾಗಿದೆ ಎಂದು ಸಿಐಡಿ ತನ್ನ ಚಾರ್ಜ್ ಶೀಟ್‌ನಲ್ಲಿ ತಿಳಿಸಿರುವುದಾಗಿ ವರದಿಗಳು ಹೇಳಿವೆ.
ಪ್ರಕರಣದ ಹಿನ್ನೆಲೆ ಏನು?
ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಮೂವರು ವಿದ್ಯಾರ್ಥಿನಿಯರು ತಮ್ಮ ಸಹಪಾಠಿಯ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂಬ ಪ್ರಕರಣ ಕಳೆದ ವರ್ಷ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಮುಸ್ಲಿಂ ವಿದ್ಯಾರ್ಥಿನಿಯರು ಹಿಂದೂ ಸಹಪಾಠಿಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ, ಎಬಿವಿಪಿ ಸೇರಿದಂತೆ ಹಿಂದುತ್ವ ಸಂಘಟನೆಗಳು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿತ್ತು.
ಪ್ರಕರಣ ಸಂಬಂಧ ಮೂವರು ವಿದ್ಯಾರ್ಥಿನಿಯರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ತನಿಖೆ ಪೂರ್ಣಗೊಳಿಸಿರುವ ಸಿಐಡಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.