ಉಡುಪಿ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಸೋಂಕು ಪತ್ತೆ ಹಿನ್ನೆಲೆ,ವ್ಯಾಪಕ ಮುನ್ನೆಚ್ಚರಿಕೆ

Views: 42
ಉಡುಪಿ: ಕುಂದಾಪುರದ ವಂಡ್ಸೆಯಲ್ಲಿ ಮಂಗನ ಕಾಯಿಲೆ ಸೋಂಕು ಪತ್ತೆಯಾಗಿದ್ದು ಜಿಲ್ಲೆಯಾದ್ಯಂತ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ವಂಡ್ಸೆಯಲ್ಲಿ ದೃಢಪಟ್ಟ ಮಂಗನ ಕಾಯಿಲೆ ಪೀಡಿತ ವ್ಯಕ್ತಿಯು ಚೇತರಿಕೆ ಕಂಡುಬಂದಿದ್ದು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಈ ವ್ಯಾಪ್ತಿಯ ಎಲ್ಲಾ ಮನೆಗಳಲ್ಲಿ ಆರೋಗ್ಯ ಅಧಿಕಾರಿಗಳ ನೇತೃತ್ವದ ತಂಡದಿಂದ ತಪಾಸಣೆ ಕಾರ್ಯ ಚುರುಕುಗೊಂಡಿದೆ.
ಉಡುಪಿ ಜಿಲ್ಲೆಯ ಕುಂದಾಪುರ,ಬೈಂದೂರು, ಹೆಬ್ರಿ, ಕಾರ್ಕಳ, ಬ್ರಹ್ಮಾವರ ತಾಲೂಕುಗಳ ಬಹುತೇಕ ಗ್ರಾಮಗಳು ಕಾಡು ಪ್ರದೇಶಗಳನ್ನು ಹೊಂದಿಕೊಂಡಿದ್ದು ಈ ಪ್ರದೇಶದ ಜನರು ಕಾಡಿಗೆ ತೆರಳುವಾಗ, ಜಾನುವಾರುಗಳನ್ನು ಮೇಯಲು ಕಾಡಿಗೆ ಹೋಗುವವರು ಅಗತ್ಯ ಕ್ರಮ ಕೈಗೊಳ್ಳಬೇಕು. ರೋಗದ ಲಕ್ಷಣ ಕಂಡುಬಂದಲ್ಲಿ ಗ್ರಾಮ ಪಂಚಾಯತ್, ಆರೋಗ್ಯ ಇಲಾಖೆ, ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಲಾಗಿದೆ.
ಕುಂದಾಪುರ ಪರಿಸರದಲ್ಲಿ ಮಂಗನ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮಂಗಗಳು ಸಾವನ್ನಪ್ಪಿದರೆ ಅಲ್ಲಿಗೆ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಅದರ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಜ್ವರ ಬಂದಲ್ಲಿ ನಿಗಾ ವಹಿಸುವುದು ಅತ್ಯಗತ್ಯ ಎಂದು ಕುಂದಾಪುರ ಆರೋಗ್ಯಾಧಿಕಾರಿ ಪ್ರೇಮಾನಂದ ತಿಳಿಸಿದ್ದಾರೆ.
ಮುನ್ನೆಚ್ಚರಿಕೆಯ ಕ್ರಮಗಳೇನು? ಗ್ರಾಮೀಣ ಪ್ರದೇಶದಲ್ಲಿ ಕಾಡಿಗೆ ಹೋಗುವರು ಸುರಕ್ಷತೆಗಾಗಿ ಮೈತುಂಬಾ ಬಟ್ಟೆ ಧರಿಸುವುದು. ಕಾಡು ಮತ್ತು ತೋಟಗಳಿಗೆ ಕೆಲಸಕ್ಕೆ ಹೋಗುವವರು ಉಣ್ಣೆಬಟ್ಟೆ ಎಣ್ಣೆ ಲೇಪಿಸಿಕೊಳ್ಳಬೇಕು. ಕೆಲಸ ಮುಗಿಸಿ ಬಂದಮೇಲೆ ಬಿಸಿ ನೀರಿನ ಸ್ನಾನ ಮಾಡಿ ಧರಿಸಿದ ಬಟ್ಟೆಗಳನ್ನು ತೊಳೆಯಬೇಕು.
ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪಾಸಿಟಿವ್ ಕಂಡುಬಂದಿರುವ ಹಿನ್ನೆಲೆಯಲ್ಲಿ ಇನ್ನೆರಡು ದಿನಗಳಲ್ಲಿ ವರದಿ ಬರಬೇಕಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಿವಿಧಡೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಮಂಗಗಳು ಸತ್ತಿರುವುದು ಕಂಡು ಬಂದರೆ ಕೂಡಲೇ ಸ್ಥಳೀಯಾಡಳಿತ ಅಥವಾ ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಪಿ ಐ ಗಡಾದ್ ತಿಳಿಸಿದ್ದಾರೆ