ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ಗೆ ಜಯಪ್ರಕಾಶ್ ಹೆಗ್ಡೆ, ಬಿಜೆಪಿಗೆ ಶೋಭಾ ಕರಂದ್ಲಾಜೆ ಪ್ರಮೋದ್ ಮಧ್ವರಾಜ್ ನಡುವೆ ಟಿಕೆಟ್ ಫೈಟ್

Views: 118
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಈ ಬಾರಿ ಬಿಜೆಪಿಯಿಂದ ಸಚಿವೆ ಶೋಭಾ ಕರಂದ್ಲಾಜೆ,ಮಾಜಿ ಸಚಿವ ಪ್ರಮೋದ್ ಮದ್ವರಾಜ್ ನಡುವೆ ಟಿಕೆಟ್ಗಾಗಿ ಫೈಟ್ ಜೋರಾಗಿದೆ. ಅಲ್ಲದೇ ಕಾಂಗ್ರೆಸ್‌ನಿಂದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ್ ಹೆಗ್ಡೆ ಟಿಕೇಟ್ ಗ್ಯಾರಂಟಿ ಎನ್ನಲಾಗುತ್ತಿದೆ.
ಕ್ಷೇತ್ರ ಪುನರ್ವಿಂಗಡನೆಯ ಹಿನ್ನೆಲೆಯಲ್ಲಿ 2008 ರಲ್ಲಿ ಮೊದಲ ಬಾರಿಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಜನ್ಮತಾಳಿತ್ತು. 2009 ರಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಕ್ಷೇತ್ರದಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಅವರು ಸೋಲನ್ನು ಕಂಡಿದ್ದರು.
ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆಯ ನಂತರ ಡಿವಿ ಸದಾನಂದ ಗೌಡ ಅವರು ರಾಜ್ಯದ ಮುಖ್ಯಮಂತ್ರಿ ಆಗಿ ಆಯ್ಕೆಯಾದ್ರು. ಈ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಕೆ.ಜಯಪ್ರಕಾಶ್ ಹೆಗ್ಡೆ ಅವರು 2,98.723 ಮತಗನ್ನು ಪಡೆಯುವ ಮೂಲಕ ಸಂಸದರಾಗಿ ಆಯ್ಕೆಯಾಗಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ವಿ.ಸುನಿಲ್ ಕುಮಾರ್ 3,52,999 ಮತಗಳನ್ನು ಪಡೆದು ಸೋಲನ್ನು ಕಂಡಿದ್ದರು.
ಆದರೆ 2014 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಚಿಕ್ಕಮಗಳೂರು – ಉಡುಪಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಈ ಚುನಾವಣೆಯಲ್ಲಿ ಬರೋಬ್ಬರಿ 5,81,168 ಮತಗಳನ್ನು ಪಡೆಯುವ ಮೂಲಕ ಸಂಸದರಾಗಿ ಆಯ್ಕೆಯಾಗಿದ್ರೆ, ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಕೇವಲ 3,99,525 ಮತ ಪಡೆದು ಸೋಲನ್ನು ಅನುಭವಿಸಿದ್ರು.
2019 ರ ಚುನಾವಣೆಯಲ್ಲಿ ಮತ್ತೆ ಶೋಭಾ ಕರಂದ್ಲಾಜೆ ಸ್ಪರ್ಧೆ ಮಾಡಿದ್ದರು. ಈ ವೇಳೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಕಾಂಗ್ರೆಸ್ ವಿರುದ್ದ ಮುನಿಸಿಕೊಂಡು ಬಿಜೆಪಿ ಸೇರ್ಪಡೆಯಾಗಿದ್ದರು. ಈ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಬರೋಬ್ಬರಿ 7,18,916 ಮತಗಳನ್ನು ಪಡೆದ ಭರ್ಜರಿ ಗೆಲುವು ದಾಖಲಿಸಿದ್ರು. ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ್ದ ಪ್ರಮೋದ್ ಮಧ್ವರಾಜ್ ಅವರು 3,69,317 ಮತ ಪಡೆದು ಸೋಲನ್ನು ಕಂಡಿದ್ದರು.
ಸಂಸದೆ ಶೋಭಾ ಕರಂದ್ಲಾಜೆ ಅವರೇ ಬಿಜೆಪಿ ಪಕ್ಷದಿಂದ ಕಣಕ್ಕಿಳಿಯುವುದು ಬಹುತೇಕ ಎನ್ನಲಾಗಿದ್ದರೂ ಕೈಯಲ್ಲಿ ಅಧಿಕಾರ ಇದ್ದರೂ ಕೂಡ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತೆ ಅಭಿವೃದ್ದಿ ಕಾರ್ಯ ನಡೆದಿಲ್ಲ ಅನ್ನೋ ಆರೋಪವಿದೆ.
ಕಳೆದ ಚುನಾವಣೆಯ ಹೊತ್ತಲೇ ಶೋಭಾ ಕರಂದ್ಲಾಜೆ ಅವರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪೇನ್ ನಡೆದಿತ್ತು. ಶೋಭಾ ಅವರಿಗೆ ಕ್ಷೇತ್ರದಲ್ಲಿ ಟಿಕೆಟ್ ಸಿಗೋದೆ ಇಲ್ಲ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಬಿಜೆಪಿ ಅಂತಿಮ ಹಂತದಲ್ಲಿ ಶೋಭಾ ಕರಂದ್ಲಾಜೆ ಅವರನ್ನೇ ಕಣಕ್ಕೆ ಇಳಿಸಿತ್ತು. ಬಿಜೆಪಿ ಕಾರ್ಯಕರ್ತರು ಅವರನ್ನು 2ನೇ ಬಾರಿಗೆ ಗೆಲ್ಲಿಸಿ ದೆಹಲಿಗೆ ಕಳುಹಿಸಿದ್ದರು.
ಕಳೆದ ಹತ್ತು ವರ್ಷಗಳ ಕಾಲ ಸಂಸದರಾಗಿದ್ದರೂ ಕೂಡ ತಮ್ಮ ಅವಧಿಯಲ್ಲಿ ಕ್ಷೇತ್ರ ಹೇಳಿಕೊಳ್ಳುವಂತಹ ಅಭಿವೃದ್ದಿಯನ್ನು ಕಂಡಿಲ್ಲ. ಅಡಿಕೆ ಬೆಳೆಗಾರರ ಸಮಸ್ಯೆ, ಮೀನುಗಾರರ ಸಮಸ್ಯೆ, ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಮುಕ್ತಿ ದೊರಕಿಲ್ಲ. ಪ್ರವಾಸೋದ್ಯಮ, ಕೃಷಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿಲ್ಲ. ಕೇಂದ್ರ ಸರಕಾರ ದೊಡ್ಡ ಯೋಜನೆಗಳನ್ನು ಜಿಲ್ಲೆಗೆ ತರುವಲ್ಲಿ ವಿಫಲರಾಗಿದ್ದಾರೆ ಎಂಬ ಮಾತು ಖುದ್ದು ಬಿಜೆಪಿ ಪಡಸಾಲೆಯಲ್ಲೇ ಕೇಳಿಬರುತ್ತಿದೆ.
ಕಾಂಗ್ರೆಸ್ ವಿರುದ್ದ ಮುನಿಸಿಕೊಂಡು ಬಿಜೆಪಿ ಸೇರ್ಪಡೆಯಾಗಿರುವ ಮಾಜಿ ಸಂಸದ ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಕೆ.ಜಯಪ್ರಕಾಶ್ ಹೆಗ್ಡೆ ಅವರೇ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರೆ.ಅವರು ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎನ್ನಲಾಗುತ್ತಿದೆ.
ಒಂದೊಮ್ಮೆ ಕೆ.ಜಯಪ್ರಕಾಶ್ ಹೆಗ್ಡೆ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ರೆ ಬಿಜೆಪಿಗೆ ದೊಡ್ಡ ಹೊಡೆತ ನೀಡಲಿದೆ. ಅದ್ರಲ್ಲೂ ಶೋಭಾ ಕರಂದ್ಲಾಜೆ ಅವರಿಗೆ ಹಿನ್ನಡೆಯಾಗಲಿದೆ ಅನ್ನೋ ಅಭಿಪ್ರಾಯವೂ ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಒಂದೆಡೆ ಜಯಪ್ರಕಾಶ್ ಹೆಗ್ಡೆ ಅವರಿಗೆ ಕ್ಷೇತ್ರದ ಜನರ ಪರಿಚಯವಿದೆ. ಇನ್ನೊಂದೆಡೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರು ಇರುವುದು ಪ್ಲಸ್ ಪಾಯಿಂಟ್.
ಬಿಜೆಪಿಯಲ್ಲಿ ಶೋಭಾ ಕರಂದ್ಲಾಜೆ ಅವರನ್ನು ಹೊರತು ಪಡಿಸಿದ್ರೆ ಕೇಳಿಬರುತ್ತಿರುವ ಮೊತ್ತೊಂದು ಹೆಸರು ಪ್ರಮೋದ್ ಮಧ್ವರಾಜ್. ಉಡುಪಿ ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ, ಶೋಭಾ ಕರಂದ್ಲಾಜೆ ಅವರಿಗೆ ಬಾರೀ ಪೈಟೋಟಿ ನೀಡಿದ್ದರು. ಈ ಬಾರಿಯ ಚುನಾವಣೆಯಲ್ಲಿಯೂ ಅವರ ಹೆಸರು ಬಿಜೆಪಿ ಪಾಳಯದಲ್ಲಿ ಬಲವಾಗಿ ಕೇಳಿಬರುತ್ತಿದೆ.
ಒಂದೊಮ್ಮೆ ಶೋಭಾ ಕರಂದ್ಲಾಜೆ ಅವರು ಸ್ಪರ್ಧೆ ಮಾಡದೇ ಇದ್ರೆ ಪ್ರಮೋದ್ ಮಧ್ವರಾಜ್ ಅವರನ್ನು ಬಿಜೆಪಿಯಿಂದ ಕಣಕ್ಕೆ ಇಳಿಸುವ ಸಾಧ್ಯತೆಯಿದೆ.
ಜೊತೆಗೆ ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದರು. ಬಹುತೇಕ ಕಾಂಗ್ರೆಸ್ ಕಾರ್ಯಕರ್ತರು, ನಾಯಕರಿಗೆ ಪ್ರಮೋದ್ ಅವರ ಬಗ್ಗೆ ಒಲವಿದೆ. ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಅಂತಿಮ ಹಂತದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ರು ಕೂಡ. ಶೋಭಾ ಕರಂದ್ಲಾಜೆ ಅವರಿಗೆ ಬಾರೀ ಪೈಪೋಟಿ ನೀಡಿದ್ದರು. ಒಂದೊಮ್ಮೆ ಜಯಪ್ರಕಾಶ್ ಹೆಗ್ಡೆ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ರೆ ಪ್ರಮೋದ್ ಮಧ್ವರಾಜ್ ಪೈಪೋಟಿ ನೀಡಲಿದ್ದಾರೆಂಬ ಮಾತು ಕೇಳಿಬಂದಿದೆ
ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಾಯಕರು, ಕಾರ್ಯಕರ್ತರ ಜೊತೆಗೆ ಪ್ರಮೋದ್ ಮಧ್ವರಾಜ್ ಚಿರಪರಿಚಿತರು. ಬಿಜೆಪಿಯಿಂದ ಪ್ರಮೋದ್ ಮಧ್ವರಾಜ್ ಅವರು ಸ್ಪರ್ಧೆ ಮಾಡಿದ್ರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿನ ಬಿಜೆಪಿ ಜೊತೆಗೆ ಜೆಡಿಎಸ್ ಪಕ್ಷದ ಅತೀ ಹೆಚ್ಚಿನ ಮತಗಳನ್ನು ಸೆಳೆಯಲು ಸಾಧ್ಯವಾಗುತ್ತದೆ.
ಕರಾವಳಿ, ಮಲೆನಾಡು, ಬಯಲುಸೀಮೆ, ಅರೆಮಲೆನಾಡು ಪ್ರದೇಶವನ್ನು ಒಳಗೊಂಡಿರುವ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ರಾಜ್ಯದಲ್ಲಿಯೇ ಪ್ರಾಕೃತಿಕವಾಗಿ ವಿಭಿನ್ನವಾಗಿರುವ ಕ್ಷೇತ್ರ. ಉಡುಪಿ ಜಿಲ್ಲೆಯ ನಾಲ್ಕು ಹಾಗೂ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕುಂದಾಪುರ, ಕಾಪು, ಉಡುಪಿ, ಕಾರ್ಕಳ, ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ಹಾಗೂ ತರಿಕೆರೆ ವಿಧಾನಸಭಾ ಕ್ಷೇತ್ರವ್ಯಾಪ್ತಿಯನ್ನು ಒಳಗೊಂಡಿದೆ.
ವಿಸ್ತೀರ್ಣದ ಲೆಕ್ಕಾಚಾರದಲ್ಲಿ ನೋಡಿದ್ರೆ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅತ್ಯಂತ ದೊಡ್ಡ ಕ್ಷೇತ್ರ. ಕರಾವಳಿಯಲ್ಲಿ ಮೀನುಗಾರಿಕೆ, ಬಯಲುಸೀಮೆಯಲ್ಲಿ ಅಡಿಕೆ, ತೆಂಗು, ಮಲೆನಾಡಲ್ಲಿ ಕಾಫಿ ಪ್ರಮುಖ ವಾಣಿಜ್ಯ ಬೆಳೆ. ರಾಜ್ಯಕ್ಕೆ ಅತೀ ಹೆಚ್ಚು ವರಮಾನವನ್ನು ತಂದುಕೊಡುತ್ತಿರುವ ಕ್ಷೇತ್ರವೂ ಹೌದು. ಆದರೆ ಕ್ಷೇತ್ರದ ಸಂಸದರೇ ಸಚಿವರಾಗಿದ್ದರೂ ಕೂಡ ಜ್ವಲಂತ ಸಮಸ್ಯೆಗಳಿಗೆ ಮಾತ್ರ ಇಂದಿಗೂ ಮುಕ್ತಿ ದೊರಕಿಲ್ಲ.
ಕಳೆದ ಒಂದೂವರೆ ದಶಕಗಳಿಂದಲೂ ಉಡುಪಿ ಜಿಲ್ಲೆಯಲ್ಲಿ ಹೊರ ಜಿಲ್ಲೆಯವರೇ ಸಂಸದರಾಗಿದ್ದಾರೆ. ಡಿವಿ ಸದಾನಂದ ಗೌಡರ ನಂತರ ಶೋಭಾ ಕರಂದ್ಲಾಜೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ, ಬದಲಾಗಿ ಹೊರ ಜಿಲ್ಲೆಯವರಿಗೆ ನೀಡಬೇಡಿ ಅನ್ನೋ ಕೂಗು ಕೇಳಿಬರುತ್ತಿದೆ.