ಆಟ ಆಡುತ್ತಾ ಅಂಗಳದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಸಿಲುಕಿ ಇಬ್ಬರು ಮಕ್ಕಳು ಉಸಿರುಗಟ್ಟಿ ಸಾವು

Views: 188
ಕನ್ನಡ ಕರಾವಳಿ ಸುದ್ದಿ: ಕಾರಿನೊಳಗೆ ಸಿಲುಕಿ ಇಬ್ಬರು ಮಕ್ಕಳು ಉಸಿರುಗಟ್ಟಿ ಮೃತಪಟ್ಟ ಘಟನೆ ಗುಜರಾತಿನ ಭಾವನಗರ ಜಿಲ್ಲೆಯ ತಲಾಜಾ ತಾಲೂಕಿನ ಪಾವ್ತಿ ಎಂಬ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ತನ್ವಿ (5.5 ವರ್ಷ) ಮತ್ತು ಹಿತ್ (4) ಮೃತಪಟ್ಟ ಮಕ್ಕಳು.
ಮಕ್ಕಳು ಕಾಣದಿರುವುದಕ್ಕೆ ಸಂಜೆಯವರೆಗೂ ಹುಡುಕಿದ ಪೋಷಕರು, ಕೊನೆಗೆ ಅನುಮಾನ ಮೂಡಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಇಣುಕಿ ನೋಡಿದಾಗ ಮಕ್ಕಳು ಒಳಗಿರುವುದು ಗೊತ್ತಾಗಿದೆ. ತಕ್ಷಣ ಕಾರಿನ ಕಿಟಕಿಗಳನ್ನು ಒಡೆದು ಮಕ್ಕಳನ್ನು ಹೊರತಂದ ಪೋಷಕರು, ತಲಾಜಾ ತಾಲೂಕಿನ ರೆಫರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಕ್ಕಳ ತಪಾಸಣೆ ನಡೆಸಿದ ವೈದ್ಯರು ಬಳಿಕ ಮೃತಪಟ್ಟಿರುವುದಾಗಿ ಖಚಿತಪಡಿಸಿದರು.
ಮನೆಯ ಹೊರಗೆ ಆಟವಾಡುತ್ತಿದ್ದ ಮಕ್ಕಳು ಆಟ ಆಡುತ್ತಾ ಅಂಗಳದಲ್ಲಿ ನಿಲ್ಲಿಸಿದ್ದ ಲಾಕ್ ಮಾಡದೆ ಇದ್ದ ಕಾರಿನೊಳಗೆ ಪ್ರವೇಶಿಸಿದ್ದಾರೆ. ಕಾರಿನ ಬಾಗಿಲುಗಳು ಸ್ವಯಂಚಾಲಿತವಾಗಿ ಲಾಕ್ ಆಗಿದ್ದು ಅವರು ಹೊರಬರಲು ಸಾಧ್ಯವಾಗಿಲ್ಲ. ಒಳಗೆ ಹೋದ ನಂತರ ಕಾರಿನ ಆಟೋ-ಲಾಕ್ ವ್ಯವಸ್ಥೆಯಿಂದ ಸಿಕ್ಕಿಹಾಕಿಕೊಂಡಿರಬಹುದು ಎಂದು ಹೇಳಲಾಗಿದೆ. ಸಂಜೆ ಮಕ್ಕಳು ಕಾಣದಿದ್ದಾಗ ಹುಡುಕಾಟ ನಡೆಸಿದಾಗ ಕಾರಿನೊಳಗೆ ಶವಗಳು ಪತ್ತೆಯಾಗಿವೆ. ಪೋಷಕರು ಮಕ್ಕಳ ಬಗ್ಗೆ ಗಮನ ಹರಿಸುವಂತೆ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸಂಜೆ 7 ಗಂಟೆ ಸುಮಾರಿಗೆ ಇಬ್ಬರೂ ಮಕ್ಕಳನ್ನು ಪೋಷಕರು ಕರೆತಂದಿದ್ದರು. ತಕ್ಷಣ ಇಬ್ಬರನ್ನೂ ತಪಾಸಣೆ ಮಾಡಲಾಯಿತು. ಆದರೆ, ಆಸ್ಪತ್ರೆಗೆ ಬರುವ ಮೊದಲೇ ಮಕ್ಕಳು ಮೃತಪಟ್ಟಿದ್ದವು ಎಂದು ವೈದ್ಯಕೀಯ ಅಧಿಕಾರಿ ಡಾ.ನಿಕುಂಜ್ ಪಾಲಿವಾಲ್ ಪ್ರತಿಕ್ರಿಯೆ ನೀಡಿದ್ದಾರೆ.






