ಇತರೆ

ಆಕಸ್ಮಿಕವಾಗಿ ಗಡಿರೇಖೆ ದಾಟಿದ ಪಾಕ್ ನಿಂದ ಬಿಎಸ್‌ಎಫ್ ಯೋಧನ ಬಿಡುಗಡೆ

Views: 73

ಕನ್ನಡ ಕರಾವಳಿ ಸುದ್ದಿ: ಕಳೆದ ಏಪ್ರಿಲ್ 23 ರಂದು ಆಕಸ್ಮಿಕವಾಗಿ ಅಂತಾರಾಷ್ಟ್ರೀಯ ಗಡಿರೇಖೆ ದಾಟಿದ್ದ ಭಾರತ ಯೋಧನನ್ನು ಬಂಧಿಸಿದ್ದ ಪಾಕ್ ಸೇನೆ ಇಂದು ಆ ಯೋಧನನ್ನು ಬಿಡುಗಡೆ ಮಾಡಿ ಭಾರತಕ್ಕೆ ಹಸ್ತಾಂತರಿಸಿದೆ.

ಪಾಕ್ ಸೇನೆಯಿಂದ ಬಂಧಿತರಾಗಿದ್ದ ಬಿಎಸ್‌ಎಫ್ ಯೋಧ ಪೂರ್ಣಂಸಾಹು ರವರನ್ನು ಪಾಕಿಸ್ತಾನ ಪಂಜಾಬ್‌ನ ಅಟ್ಠಾರಿ- ವಾಘ ಗಡಿ ಮುಂಭಾಗದ ಮೂಲಕ ಭಾರತಕ್ಕೆ ಹಸ್ತಾಂತರಿಸಿದೆ ಎಂದು ಸೇನಾ ಪಡೆಗಳು ತಿಳಿಸಿವೆ.

ಇಂದು ಬೆಳಿಗ್ಗೆ 10:30ಕ್ಕೆ ಪಾಕಿಸ್ತಾನದ ರೇಂಜರ್‌ಗಳು ಸಾಹು ರವರನ್ನು ಬಿಎಸ್‌ಎಫ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಈ ಹಸ್ತಾಂತರ ಶಾಂತಿಯುತವಾಗಿ ಶಿಷ್ಟಾಚಾರಗಳಿಗೆ ಅನುಸಾರವಾಗಿ ನಡೆಯಿತು ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.

ಕಳೆದ ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಉಗ್ರರು ನಾಗರಿಕರ ಮೇಲೆ ದಾಳಿ ನಡೆಸಿ 26 ನಾಗರಿಕರನ್ನು ಹತ್ಯೆ ಮಾಡಿದ ನಂತರ ಏಪ್ರಿಲ್ 23 ರಂದು ಫಿರೋಜ್‌ಪುರ ಜಿಲ್ಲೆಯ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿರೇಖೆಯನ್ನು ಸಾಹು ಆಕಸ್ಮಿಕವಾಗಿ ದಾಟಿದ್ದರು. ಗಡಿರೇಖೆ ದಾಟಿದ ಸಾಹುರವರನ್ನು ಪಾಕಿಸ್ತಾನ ಸೇನೆ ಬಂಧಿಸಿತ್ತು.

ಯೋಧನ ಬಿಡುಗಡೆ ಸಂಬಂಧ ಭಾರತ ಮತ್ತು ಪಾಕ್ ಸೇನೆಗಳ ಸೇನಾಧಿಕಾರಿಗಳು ಮಾತುಕತೆ ನಡೆಸಿದ್ದರು. ಈ ಮಾತುಕತೆ ನಂತರ ಪಾಕಿಸ್ತಾನ ಭಾರತೀಯ ಯೋಧನನ್ನು ಬಿಡುಗಡೆ ಮಾಡಿದೆ.

ಪಶ್ಚಿಮ ಬಂಗಳಾದ ಗೂಗ್ಲಿ ಜಿಲ್ಲೆಯ ಗ್ರಾಮದ ರಿಪ್ರಾಂನಲ್ಲಿ ಪೂರ್ಣಂಸಾಹು ಕುಟುಂಬ ವಾಸಿಸುತ್ತಿದೆ.

Related Articles

Back to top button