ಅಯೋಧ್ಯ ಶ್ರೀರಾಮನ ದರ್ಶನ ಮಾಡಿ ಇಹಯಾತ್ರೆ ಮುಗಿಸಿದ ಉಡುಪಿಯ ಪಾಂಡುರಂಗ ಶಾನುಭಾಗ್..!

Views: 574
ಉಡುಪಿಯ ಸಂಘದ ಹಿರಿಯ ಸಕ್ರಿಯ ಮತ್ತು ರಾಷ್ಟ್ರಭಕ್ತ ಪಾಂಡುರಂಗ ಶಾನುಭಾಗರು ಅಯೋಧ್ಯೆಯಲ್ಲಿ ಭಾನುವಾರ ಮಧ್ಯಾಹ್ನ ರಾಮಮಂದಿರದ ಸಮೀಪದಲ್ಲಿ ಹೃದಯಾಘಾತದಿಂದ ಇಹದ ಯಾತ್ರೆ ಮುಗಿಸಿದ್ದಾರೆ.
ಇವತ್ತು ಬೆಳಿಗ್ಗೆ ರಾಮನ ದರ್ಶನ ಪಡೆದು ಅತ್ಯಂತ ಧನ್ಯತೆಯನ್ನು ವ್ಯಕ್ತಪಡಿಸಿ ಪೇಜಾವರ ಶ್ರೀಗಳಿಂದ ಕಲಶಾಭಿಷೇಕದ ತೀರ್ಥ ಪ್ರಸಾದ ಸ್ವೀಕರಿಸಿ ಸಂತೋಷದಿಂದ ತೆರಳಿದ್ದರು .
ಅಪರಾಹ್ನದ ಪಲ್ಲಕ್ಕಿಉತ್ಸವಕ್ಕೆ ಆಗಮಿಸುವಾಗ ಮಂದಿರದ ಹೊರಭಾಗದ ಗೇಟ್ ಬಳಿಯಲ್ಲಿ ಅವರಿಗೆ ಹೃದಯಾಘಾತವಾಗಿದೆ . ಸಮೀಪವರ್ತಿಗಳು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.
ಜೀವನ ಪರ್ಯಂತ ಹಿಂದು ಸಿದ್ಧಾಂತಕ್ಕಾಗಿ ದೈಹಿಕ ಅಂಧತ್ವವಿದ್ದರೂ , ಸಂಘದಲ್ಲಿ ಅತ್ಯಂತ ಸಕ್ರಿಯರಾಗಿದ್ದ ಶಾನುಭಾಗರು ಅಪೂರ್ವ ಚಿಂತಕರೂ ರಾಷ್ಟ್ರ ಭಕ್ತರೂ ಆಗಿದ್ದರು .
ಅವರ ಅಗಲುವಿಕೆಯಿಂದ ನಿಜಕ್ಕೂ ದುಃಖವಾಗಿದೆ ಆದರೆ ರಾಮ ದರ್ಶನ ಪಡೆದು ರಾಮನ ಪಾದಮೂಲದಲ್ಲಿ ಜೀವನಯಾತ್ರೆ ಮುಗಿಸಿದ ಶಾನುಭಾಗರ ಜೀವನ ರಾಮನ ಚಿತ್ತಕ್ಕೂ ಬಂದಂತಿದೆ .
ಪೇಜಾವರ ಶ್ರೀ ಆಘಾತ ..
ಬೆಳಿಗ್ಗೆ ಶಾನಾಭಾಗರಿಗೆ ಸಂತೋಷದಿಂದ ತೀರ್ಥಪ್ರಸಾದ ನೀಡಿ ಸಂಸ್ಕೃತ ದಲ್ಲೇ ಸಂಭಾಷಣೆ ನಡೆಸಿ ಕುಶಲೋಪರಿ ನಡೆಸಿದ್ದ ಪೇಜಾವರ ಶ್ರೀಗಳು ಈ ಸುದ್ದಿ ತಿಳಿದು ಆಘಾತ ವ್ಯಕ್ತಪಡಿಸಿದ್ದು ಅವರ ಆತ್ಮಕ್ಕೆ ರಾಮನು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ. ವಿ ಹಿಂಪ ಮುಖಂಡ ಗೋಪಾಲ್ ಜಿ, ಮಾಜಿ ಶಾಸಕ ರಘುಪತಿ ಭಟ್ ಸ್ಥಳದಲ್ಲಿದ್ದು ಮುಂದಿನ ವ್ಯವಸ್ಥೆಗಳ ಬಗ್ಗೆ ಕಾರ್ಯಪ್ರವೃತ್ತರಾಗಿದ್ಧಾರೆ .