ಕರಾವಳಿ

ಅಮಾಸೆಬೈಲು: ಮೂಲಭೂತ ಸೌಕರ್ಯ ಒದಗಿಸದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Views: 72

ಕುಂದಾಪುರ, ದಲಿತ ಕಾಲನಿ ಮೂಲಭೂತ ಸೌಕರ್ಯಗಳಾದ ರಸ್ತೆದುರಸ್ತಿ, ಬೀದಿ ದೀಪ, ಚರಂಡಿ ದುರಸ್ತಿ, ನೆಟ್‌ವರ್ಕ್ ಲಭ್ಯತೆ, ಹಕ್ಕುಪತ್ರ ಸೌಕರ್ಯದಿಂದ ವಂಚಿತವಾಗಿದ್ದು, ಕೂಡಲೇ ಮೂಲಭೂತ ಸೌಕರ್ಯ ಒದಗಿಸದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ಕೆಳಾಸುಂಕ, ಕೆರೆಗದ್ದೆ ಭಾಗದ ನೊಂದ ಪರಿಶಿಷ್ಟ ಪಂಗಡ ಕಾಲೋನಿಯ (2ನೇ ವಾರ್ಡ್) ನಿವಾಸಿಗಳು ಘೋಷಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಅಳವಡಿಸಿದ್ದ ಬ್ಯಾನರ್‌ನ್ನು ಇದೀಗ ಅಧಿಕಾರಿಗಳು ತೆರವು ಮಾಡಿದ್ದು, ಇದರ ವಿರುದ್ಧ ಈ ಗ್ರಾಮಗಳ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಳಾಸುಂಕ ಸಮೀಪದಿಂದ ಕೆರೆಗದ್ದೆಗೆ ಸಂಪರ್ಕ ರಸ್ತೆಯೇ ಆಗಿಲ್ಲ. ಸುಮಾರು 1 ಕಿಮೀ ದೂರ ರಸ್ತೆ ಬಳಕೆ ಮಾಡಲು ಹರಸಾಹಸ ಪಡಬೇಕು. ವಿದ್ಯಾರ್ಥಿಗಳು ಸಹಿತ 7 ಕುಟುಂಬದ 30 ಮಂದಿ ಇಲ್ಲಿ ವಾಸವಿದ್ದಾರೆ. ರಸ್ತೆಗೆ ಬೇಡಿಕೆಯಿಟ್ಟು ಹಲವು ವರ್ಷಗಳು ಸಂದರೂ ಫಲಿತಾಂಶ ಮಾತ್ರ ಶೂನ್ಯ.

ಇನ್ನು ನೆಟ್ವರ್ಕ್ ಸಮಸ್ಯೆಯೂ ಇಲ್ಲಿನ ಬಹಳಷ್ಟು ಮಂದಿಯನ್ನು ಕಾಡುತ್ತಿದೆ. ಚರಂಡಿ, ಹಕ್ಕುಪತ್ರ ಮೊದಲಾದ ಸೌಕರ್ಯ ಗಳ ಕೊರತೆಯಿಂದ ಜನರು ದಿನನಿತ್ಯ ಹಲವು ಸಮಸ್ಯೆ ಅನುಭವಿಸುವಂತಾಗಿದೆ.

ಬ್ಯಾನರ್ ತೆರವು ಮಾಡಿದ್ದಕ್ಕೆ ಆಕ್ರೋಶ: ಎರಡು ಗ್ರಾಮಗಳ ಜನತೆ ಮೂಲಭೂತ ಸೌಕರ್ಯಗಳಾದ ರಸ್ತೆ ದುರಸ್ತಿ, ಬೀದಿ ದೀಪ, ಚರಂಡಿ ದುರಸ್ತಿ, ನೆಟ್ವರ್ಕ್, ಹಕ್ಕು ಪತ್ರ ಮೊದಲಾದ ಸೌಕರ್ಯದಿಂದ ವಂಚಿತರಾಗಿದ್ದಾರೆ. ಮುಂದೆ ಬರುವ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಮೊದಲು ಕಾಲನಿಯ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಆಗ್ರಹಿಸಿ ಬ್ಯಾನರ್ ಅಳವಡಿಸ ಲಾಗಿತ್ತು.

ಆದರೆ ಏಕಾಏಕಿ ಬ್ಯಾನರ್ ತೆರವು ಮಾಡಿದ ಅಮಾಸೆಬೈಲು ಪಿಡಿಓ ನಡೆ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪರವಾನಿಗೆ ಇಲ್ಲದಿರುವ ಬ್ಯಾನರ್, ಬಂಟಿಂಗ್ಸ್ ಗಳನ್ನು ಅಳವಡಿಸಿದ್ದರೂ ಅವುಗಳ ತೆರವಿನ ಬಗ್ಗೆ ಗ್ರಾಪಂ ಕ್ರಮವಹಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಊರಿನ ಮೂಲಸೌಕರ್ಯದ ಬಗ್ಗೆ ಪರಿಶಿಷ್ಟ ಪಂಗಡ ಕಾಲೋನಿ ನಿವಾಸಿಗಳ ಬೇಡಿಕೆ ಈಡೇರಿಸದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಲು ಅಳವಡಿಸಿದ ಬ್ಯಾನರನ್ನು ಗ್ರಾಪಂ ಪಿಡಿಒ ಅವರು ಪರಿಶಿಷ್ಟ ಪಂಗಡದ ನಿವಾಸಿಗಳನ್ನು ಭೇಟಿಯಾಗಿ ಕಷ್ಟ ಕೇಳದೆ, ಯಾವುದೇ ಮಾಹಿತಿ ನೀಡದೇ ತೆರವುಮಾಡಿದ್ದಾರೆ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

Related Articles

Back to top button