‘ಅಪ್ಪ-ಅಮ್ಮ’ ನನಗೆ ವೋಟ್ ಹಾಕದಿದ್ದರೆ ನೀವು ಊಟ ಮಾಡಬೇಡಿ, ಶಾಲಾ ಮಕ್ಕಳಿಗೆ ಹೇಳಿದ ಶಾಸಕ :ವಿವಾದದ ಹೇಳಿಕೆ ವೈರಲ್

Views: 45
ಮಹಾರಾಷ್ಟ್ರ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಶಾಸಕ ಸಂತೋಷ್ ಬಂಗಾರ್ ನಿಮ್ಮ ಹೆತ್ತವರು ತನಗೆ ಮತ ಹಾಕದಿದ್ದರೆ ಎರಡು ದಿನ ಊಟ ಮಾಡಬೇಡಿ ಎಂದು ಮಕ್ಕಳಿಗೆ ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.
ಚುನಾವಣಾ ಆಯೋಗವು ಚುನಾವಣಾ ಸಂಬಂಧಿತ ಚಟುವಟಿಕೆಗಳಲ್ಲಿ ಮಕ್ಕಳನ್ನು ಬಳಸದಂತೆ ನಿರ್ದೇಶನಗಳನ್ನು ಹೊರಡಿಸಿದ ಒಂದು ವಾರದಲ್ಲೇ ಕಳಮ್ನೂರಿ ಶಾಸಕ ಸಂತೋಷ್ ಬಂಗಾರ್ ಅವರ ಹೇಳಿಕೆಗಳು ಹೊರಬಿದ್ದಿದ್ದು, ಚುನಾವಣಾ ಆಯೋಗದ ನಿರ್ದೇಶನಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಕಂಡು ಬಂದಿದೆ. ಇದರ ಜೊತೆಗೆ ಶಾಲೆಗೆ ತೆರಳಿ ಶಾಸಕ ಚುನಾವಣಾ ಕ್ಯಾಂಪೇನ್ ಆರಂಭಿಸಿದ್ದಾರೆ ಎಂಬಂತಹ ಟೀಕೆ ವ್ಯಕ್ತವಾಗಿದೆ.
ಈ ಕುರಿತ ಶಾಸಕ ಸಂತೋಷ್ ಬಂಗಾರ್ ಅವರ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಮುಂದಿನ ಚುನಾವಣೆಯಲ್ಲಿ ನಿಮ್ಮ ಪೋಷಕರು ನನಗೆ ಮತ ಹಾಕದಿದ್ದರೆ, ಎರಡು ದಿನ ಊಟ ಮಾಡಬೇಡಿ ಎಂದು ಬಂಗಾರ್ ಅವರು ಹಿಂಗೋಲಿ ಜಿಲ್ಲೆಯ ಜಿಲ್ಲಾ ಪರಿಷತ್ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಹೇಳಿರುವುದು ಸೆರೆಯಾಗಿದೆ.
ಶಾಸಕ ಬಂಗಾರ್ ಅವರು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳಿಗೆ, ಸಂತೋಷ್ ಬಂಗಾರ್ ಅವರಿಗೆ ಮತ ನೀಡಿ, ಆಗ ಮಾತ್ರ ನಾವು ತಿನ್ನುತ್ತೇವೆ ಎಂದು ಅಪ್ಪ-ಅಮ್ಮನಿಗೆ ಉತ್ತರಿಸಬೇಕು ಎಂದು ಹೇಳುತ್ತಿರುವುದು ಕಂಡು ಬರುತ್ತದೆ, ನಂತರ ಶಾಸಕರು ಮುಂದಿನ ಚುನಾವಣೆಯಲ್ಲಿ ಯಾರಿಗೆ ಮತ ಹಾಕಬೇಕು ಎಂಬುದರ ಕುರಿತು ತಮ್ಮ ಪೋಷಕರ ಮುಂದೆ ಹೇಳುವುದನ್ನು ಪುನರಾವರ್ತಿಸುವಂತೆ ಮಕ್ಕಳಿಗೆ ಹೇಳಿದ್ದಾರೆ.
ಬಂಗಾರ್ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿಯ ನಾಯಕರು ವಾಗ್ಧಾಳಿಯನ್ನು ನಡೆಸಿದ್ದಾರೆ. ಎನ್‌ಸಿಪಿ(ಶರದ್ ಪವಾರ್ ಬಣ) ವಕ್ತಾರ ಕ್ಲೈಡ್ ಕ್ರಾಸ್ಟೊ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಬಂಗಾರ್ ಶಾಲಾ ಮಕ್ಕಳಿಗೆ ಹೇಳಿರುವುದು ಚುನಾವಣಾ ಆಯೋಗದ ನಿರ್ದೇಶನಕ್ಕೆ ವಿರುದ್ಧವಾಗಿದೆ, ಆದ್ದರಿಂದ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅವರು ಬಿಜೆಪಿಯ ಮಿತ್ರರಾಗಿರುವುದರಿಂದ ಆರಾಮವಾಗಿದ್ದಾರೆ. ಆಯೋಗವು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.