ಅತಿಥಿ ಶಿಕ್ಷಕನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಬೀಸಾಡಿದ ಕೇಸ್‌ಗೆ ಬಿಗ್ ಟ್ವಿಸ್ಟ್!

Views: 99
ಮಗಳ ಪ್ರೀತಿಯನ್ನು ಒಪ್ಪದ ತಂದೆಯನ್ನೇ ಮಗಳು ತನ್ನ ತಾಯಿಯೊಂದಿಗೆ ಸೇರಿಕೊಂಡು ಕೊಲೆ ಮಾಡಿರುವುದು ದುರ್ದೈವದ ಸಂಗತಿಯಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಶುಕ್ರವಾರ ಮೋದೂರು ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಮರಿಯಪ್ಪ (47) ಅವರನ್ನು ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕುಳ್ಳನಂಜಯ್ಯನಪಾಳ್ಯದ ಜಮೀನಿನ ಬಳಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಬೀಸಾಡಲಾಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಎಲ್ಲ ಆಯಾಮಗಳಲ್ಲಿಯೂ ವಿಚಾರಣೆ ಆರಂಭಿಸಿದ ಪೊಲೀಸರಿಗೆ ಪ್ರತಿ ಹಂತದಲ್ಲಿ ರೋಚಕ ತಿರುವುಗಳು ಸಿಗುತ್ತಾ ಹೋಗಿವೆ. ಅಂತಿಮವಾಗಿ ಕೊಲೆಯಾದ ಅತಿಥಿ ಶಿಕ್ಷಕನ ಹೆಂಡತಿ ಶೋಭಾ ಹಾಗೂ ಮಗಳು ಹೇಮಲತಾ ಸೇರಿ ತಂದೆಯನ್ನು ಕೊಲೆ ಮಾಡುವುದಕ್ಕೆ ಸುಪಾರಿ ಕೊಟ್ಟಿರುವ ಮಾಹಿತಿ ಬಯಲಿಗೆ ಬಂದಿದೆ.
ತಾಯಿ-ಮಗಳು ಹಾಗೂ ಕೊಲೆ ಮಾಡಿದವರನ್ನು ಸೇರಿ 8 ಜನರನ್ನು ವಶಕ್ಕೆ ಪಡೆದಿದ್ದಾರೆ.
ಅತಿಥಿ ಶಿಕ್ಷಕ ಮರಿಯಪ್ಪನ ಮಗಳು ಹೇಮಲತಾ ಅದೇ ಗ್ರಾಮದ ಶಾಂತಕುಮಾರ ಎನ್ನುವ ಯುವಕನ್ನು ಪ್ರೀತಿ ಮಾಡಿದ್ದಳು. ಆದರೆ, ಇವರ ಪ್ರೀತಿಗೆ ತಾಯಿ ಶೋಭಾ ಒಪ್ಪಿಗೆ ಸೂಚಿಸಿದ್ದರೂ, ತಂದೆ ಮಾತ್ರ ಭಾರಿ ವಿರೋಧ ವ್ಯಕ್ತಪಡಿಸಿದ್ದನು. ಈ ಸಂಬಂಧ ಶಿಕ್ಷಕ ಮರಿಯಪ್ಪ ತನ್ನ ಮಗಳನ್ನು ಪ್ರೀತಿಸಿದ್ದ ಶಾಂತಕುಮಾರ ಯುವಕನನ್ನು ಥಳಿಸಿದ್ದನು. ಇದರಿಂದ ಶಾಂತಕುಮಾರ್ ಗೆ ಮರಿಯಪ್ಪ ಮೇಲೆ ದ್ವೇಷ ಹೆಚ್ಚಾಗಿತ್ತು. ಸೇಡು ತೀರಿಸಿಕೊಳ್ಳಲು ಶಾಂತಕುಮಾರ್ ಸ್ನೇಹಿತರ ಜೊತೆಗೆ ಗೂಡಿ ಮರಿಯಪ್ಪ ಕೊಲೆಗೆ ಸಂಚು ರೂಪಿಸಿದ್ದನು.
ಬೆಂಗಳೂರಿನಲ್ಲಿ ವಾಸವಿದ್ದ ಶಾಂತಕುಮಾರ್ ಸ್ನೇಹಿತರಾದ ಸಂತು, ಹೇಮಂತ್ ಅವರಿಗೆ ಕೊಲೆ ಸುಫಾರಿ ನೀಡಲಾಗಿತ್ತು. ಹೇಮಂತ್ ಮೂರು ಬಾಲಕರನ್ನು ಬಳಸಿಕೊಂಡು ಕೊಲೆ ಮಾಡಿದ್ದಾನೆ.
ಇನ್ನು ಶಿಕ್ಷಕ ಮರಿಯಪ್ಪನ ಕೊಲೆಯ ದಿನ ಆತನ ಚಲನ ವಲನಗಳ ಬಗ್ಗೆ ತಾಯಿ-ಮಗಳು ಸುಪಾರಿ ಹಂತಕರಿಗೆ ಮಾಹಿತಿ ನೀಡಿದ್ದರು. ಮರಿಯಪ್ಪ ಅಮವಾಸ್ಯೆ ಪೂಜೆ ಮುಗಿಸಿ ವಾಪಸ್ ಗ್ರಾಮಕ್ಕೆ ಬರುತ್ತಿದ್ದ ಮಾಹಿತಿಯನ್ನು ಶಾಂತಕುಮಾರ್ ಗೆ ಹೇಳಿದ್ದರು. ಮರಿಯಪ್ಪ ಗ್ರಾಮದ ಬಳಿ ಬರುವ ಸಂದರ್ಭದಲ್ಲಿ ಬೈಕ್ ಅಡ್ಡಗಟ್ಟಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದಿದ್ದರು. ಗಾಬರಿಗೊಂಡ ಮರಿಯಪ್ಪ ಬೈಕ್ ನಿಂದ ಕೆಳಗಿಳಿದು ಓಡಿ ಹೋಗಿದ್ದರು. ಬೆನ್ನತ್ತಿ ಹೋದ ಪಾತಕಿಗಳು ಮಾರಕಾಸ್ತ್ರಗಳಿಂದ ಕೊಚ್ಚಿಕೊಲೆ ಮಾಡಿದ್ದರು.
ಕುಣಿಗಲ್ ಪೊಲೀಸರು ಶಾಂತಕುಮಾರ್, ಸಂತು, ಹೇಮಂತ್, ಶೋಭಾ, ಹೇಮಲತಾ ಹಾಗೂ ಮೂವರು ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟು 8 ಜನರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ. ಆದರೆ, ಕೊಲೆಯಾದ ದಿನ ಸ್ವತಃ ತನ್ನ ತಂದೆಯ ಕೊಲೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಹೇಮಲತಾ ದೂರು ನೀಡಿದ್ದಳು. ಆದರೆ, ಪೊಲೀಸರು ಹೇಮಲತಾ ಪ್ರೇಮ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದಾಗ ಕೊಲೆ ಪ್ರಕರಣ ಬಯಲಾಗಿದೆ.