ಹೈಕಮಾಂಡ್ ಬುಲಾವ್ ಡಿಕೆಶಿ ದೆಹಲಿಗೆ ದೌಡು

Views: 0
ಬೆಂಗಳೂರು, ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಚರ್ಚೆಗಳು ನಡೆಯುತ್ತಿರುವಾಗಲೇ ಕಾಂಗ್ರೆಸ್ ಹೈಕಮಾಂಡ್ ಡಿ.ಕೆ. ಶಿವಕುಮಾರ್ ಅವರಿಗೆ ದೆಹಲಿಗೆ ಬರುವಂತೆ ಬುಲಾವ್ ಕಳುಹಿಸಿದ್ದು, ಅದರಂತೆ ಡಿ.ಕೆ. ಶಿವಕುಮಾರ್ ಇಂದು ದೆಹಲಿಗೆ ತೆರಳಿರುವುದು ಕುತೂಹಲಕ್ಕೆಡೆ ಮಾಡಿಕೊಟ್ಟಿದೆ.
ಡಿಕೆ ಶಿವಕುಮಾರ್‌ರವರ ದೆಹಲಿ ಭೇಟಿ ಪಕ್ಷದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ದಿಢೀರ್ ಎಂದು ವರಿಷ್ಠರು ಡಿಕೆಶಿ ಅವರನ್ನು ದೆಹಲಿಗೆ ಕರೆಸಿಕೊಂಡಿರುವ ಬಗ್ಗೆ ನಾನಾ ವ್ಯಾಖ್ಯಾನಗಳು ಕೇಳಿ ಬರುತ್ತಿವೆ.ದೆಹಲಿಗೆ ತೆರಳಿರುವ ಡಿ.ಕೆ. ಶಿವಕುಮಾರ್ ಅವರು ಇಂದು ಸಂಜೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ವರಿಷ್ಠರನ್ನು ಭೇಟಿ ಮಾಡಿದರು. ಸಮಯ ಸಿಕ್ಕರೆ ಸೋನಿಯಾಗಾಂಧಿಯವರು ಭೇಟಿ ಮಾಡಲಿದ್ದಾರೆ.
ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಬಗ್ಗೆ ನಾನಾ ವ್ಯಾಖ್ಯಾನಗಳು ಕೇಳಿ ಬರುತ್ತಿದ್ದು, ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಆಗುವರು ಎಂದು ಕೆಲ ಶಾಸಕರು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದಿನ ಐದು ವರ್ಷ ನಾನೇ ಸಿಎಂ ಎಂದು ಖುದ್ಧು ಹೇಳಿಕೆ ನೀಡುವ ಜತೆಗೆ ಸಿದ್ಧರಾಮಯ್ಯ ಬೆಂಬಲಕ್ಕೆ ಹಲವು ಸಚಿವರು ನಿಂತಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿದೆ. ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಗೆ ಬರುವಂತೆ ಬುಲಾವ್ ನೀಡಿದೆ. ಅದರಂತೆ ಇಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ.ಮುಂದೆ ಸಿದ್ಧರಾಮಯ್ಯ ಅವರನ್ನು ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್ ಕಳುಹಿಸಬಹುದು. ರಾಜ್ಯದಲ್ಲಿ ಬಹುಮತದಿಂದ ಅಧಿಕಾರಕ್ಕ ಬಂದ ಕಾಂಗ್ರೆಸ್ ಸರ್ಕಾರ ಆರು ತಿಂಗಳು ಪೂರೈಸುವಷ್ಟರಲ್ಲೇ ಅಧಿಕಾರ ಹಂಚಿಕೆ ಬಗ್ಗೆ ಬಹಿರಂಗ ಚರ್ಚೆಗಳು ನಡೆದಿದ್ದು, ಎರಡೂವರೆವರ್ಷ ನಂತರ ಸಿಎಂ ಬದಲಾಗಲಿದ್ದಾರೆ ಎಂಬ ವಿಚಾರ ಕಾಂಗ್ರೆಸ್‌ನಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದ್ದು, ಸಿಎಂ ಬದಲಾಗಲ್ಲ ಐದು ವರ್ಷ ಸಿದ್ಧರಾಮಯ್ಯ ರವರೇ ಮುಖ್ಯಮಂತ್ರಿ ಎಂಬ ಹೇಳಿಕೆಗಳು ಕಾಂಗ್ರೆಸ್‌ನಲ್ಲಿ ಕಿಚ್ಚು ಹಚ್ಚಿಸಿವೆ. ಇದು ಪಕ್ಷದಲ್ಲಿ ನಾಯಕತ್ವದ ಬಗ್ಗೆ ಭಿನ್ನಾಭಿಪಾಯಗಳಿಗೆ ಕಾರಣಗಳಾಗಿವೆ. ಹಾಗೆಯೇ ವಿಪಕ್ಷಗಳಿಗೂ ಅಸ್ತ್ರದಂತಾಗಿದ್ದು, ನಾಯಕತ್ವದ ಜಗಳದಿಂದ ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತಗೊಂಡಿದೆ ಎಂದು ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಆರೋಪಿಸಿವೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಲ್ಲದಕ್ಕೂ ತೆರೆ ಎಳೆಯಲು ಮುಂದಾಗಿದ್ದು, ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ಅವರಿಗೆ ದೆಹಲಿಗೆ ಕರೆಸಿಕೊಂಡು ಹೈಕಮಾಂಡ್ ಕೆಲ ಸಂದೇಶಗಳನ್ನು ನೀಡಲಿದೆ ಎಂದು ಹೇಳಲಾಗಿದೆ.






