ಮಗಳನ್ನು ಶಾಲೆಯಲ್ಲಿ ಬಿಟ್ಟು ಬಂದ ಬಳಿಕ ಬ್ರೇಕ್ ಬದಲಿಗೆ ಆಕ್ಸಿಡೇಟರ್ ತುಳಿದು ಕೊಳಕ್ಕೆ ನುಗ್ಗಿದ ಕಾರು: ಮಹಿಳೆ ಸಾವು
Views: 74
ಕನ್ನಡ ಕರಾವಳಿ ಸುದ್ದಿ: ಡ್ರೈವಿಂಗ್ ಕಲಿಯುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಕೊಳಕ್ಕೆ ಬಿದ್ದ ಪರಿಣಾಮ, ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕೊಲ್ಕತ್ತಾದ ಕೆಸ್ಟೊಪುರದ ಪ್ರಫುಲ್ಲ ಕಾನನ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಮೃತರನ್ನು 42 ವರ್ಷದ ಸುಮಿತ್ರಾ ದಾಸ್ ಎಂದು ಗುರುತಿಸಲಾಗಿದೆ. ಸುಮಿತ್ರಾ ಅವರು ತಮ್ಮ ಮಗಳನ್ನು ಸ್ಕೂಟರ್‌ನಲ್ಲಿ ಶಾಲೆಯಲ್ಲಿ ಬಿಟ್ಟು ಬಂದ ಬಳಿಕ, ಗ್ಯಾರೆಜ್ನಿಂದ ತಮ್ಮ ಹ್ಯುಂಡೈ ಇಯಾನ್ ಕಾರನ್ನು ಹೊರತೆಗೆದು ಡ್ರೈವಿಂಗ್ ಅಭ್ಯಾಸ ಮಾಡಲು ಹೊರಟಿದ್ದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಸುಮಿತ್ರಾ ದಾಸ್ ಕಾರು ಚಾಲನೆ ಮಾಡುವಾಗ ಸ್ಟೀರಿಂಗ್ ನಿಯಂತ್ರಣ ಕಳೆದುಕೊಂಡು ಪ್ರಫುಲ್ಲ ಕಾನನ್ ಉತ್ಸವ್ ಗಾರ್ಡನ್‌ನಲ್ಲಿರುವ ಕೊಳಕ್ಕೆ ಬಿದ್ದಿದೆ. 10 ರಿಂದ 12 ಅಡಿ ಆಳವಿರುವ ಕೊಳದಲ್ಲಿ ಕಾರು ಮುಳುಗಿರುವುದನ್ನು ಕಂಡ ಸ್ಥಳೀಯರು ಕೊಳದೊಳಗೆ ಇಳಿದು ಮಹಿಳೆಯನ್ನು ಬದುಕಿಸಲು ಯತ್ನಿಸಿದರು. ಆದರೆ, ಸಾಧ್ಯವಾಗಲಿಲ್ಲ. ಕೊನೆಗೆ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ಕೊಟ್ಟಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ತೀವ್ರ ರಕ್ಷಣಾ ಕಾರ್ಯಾಚರಣೆಯ ಬಳಿಕ ಅಗ್ನಿಶಾಮಕ ದಳ ಹಾಗೂ ಪೊಲೀಸರು ಕೊಳದಿಂದ ಕಾರನ್ನು ಕೆರೆಯಿಂದ ತೆಗೆದಿದ್ದಾರೆ ಎನ್ನಲಾಗಿದೆ.
ಸುಮಿತ್ರಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದ್ದು, ಪೊಲೀಸರು ಈ ಘಟನೆಯ ಕುರಿತು ತಕ್ಷಣದ ತನಿಖೆಯನ್ನು ಆರಂಭಿಸಿದ್ದಾರೆ






