ರಾಜಕೀಯ

‘ಮುಂದಿನ 5 ವರ್ಷ ನಾನೇ ಸಿಎಂ’ ಸಿದ್ದರಾಮಯ್ಯನವರ ಹೇಳಿಕೆ ಕಾಂಗ್ರೆಸ್‌ನಲ್ಲಿ ಸಂಚಲನ: ಡಿಕೆಶಿ ನಡೆ ನಿಗೂಢ!

Views: 0

ಬೆಂಗಳೂರು, ಮುಂದಿನ 5 ವರ್ಷ ನಾನೇ ಸಿಎಂ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದ್ದು, ಈ ಬಗ್ಗೆ ಭಾರೀ ಚರ್ಚೆಗಳು ನಡೆದಿವೆ.ಮುಖ್ಯಮಂತ್ರಿಯಾಗಿ 6 ತಿಂಗಳಷ್ಟೇ ಪೂರೈಸಿರುವ ಸಿದ್ದರಾಮಯ್ಯ ಅವರು ಇದ್ದಕ್ಕಿದ್ದಂತೆ ಮುಂದಿನ 5 ವರ್ಷ ನಾನೇ ಸಿಎಂ ಎಂದು ಹೇಳಿಕೆ ನೀಡಲು ಕಾರಣ ಏನು, ಈ ಹೇಳಿಕೆಯ ಹಿಂದಿನ ಗೂಡಾರ್ಥವೇನು ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಬಿರುಸಿನ ಚರ್ಚೆಗಳು ನಡೆದಿವೆ.

ಹೊಸಪೇಟೆಯಲ್ಲಿ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯಯ ಮುಂದಿನ 5 ವರ್ಷ ನಾನೇ ಸಿಎಂ, ಕೆಲಸಕ್ಕೆ ಬಾರದವರು ಸಿಎಂ ಬದಲಾವಣೆ ಹೇಳಿಕೆ ನೀಡುತ್ತಿದ್ದಾರೆ ಎಂದು ಮಾತನಾಡಿದ್ದರು. ಮುಖ್ಯಮಂತ್ರಿ ಹೇಳಿಕೆಗೆ ನಾನಾ ವ್ಯಾಖ್ಯಾನಗಳು ಕೇಳಿ ಬರುತ್ತಿದ್ದು, ಕಾಂಗ್ರೆಸ್‌ನಲ್ಲೂ ಪರ- ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ 5 ವರ್ಷ ನಾನೇ ಸಿಎಂ ಹೇಳಿಕೆಗೆ ಎರಡೂವರೆ ವರ್ಷದ ನಂತರ ಮುಖ್ಯಮಂತ್ರಿಯಾಗುವ ಆಸೆ ಇಟ್ಟುಕೊಂಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ಬಗ್ಗೆ ನಾನೇನು ಮಾತನಾಡಲ್ಲ. ನಾನು ಹೈಕಮಾಂಡ್ ಮಾತನ್ನಷ್ಟೇ ಕೇಳುತ್ತೇನೆ ಎಂದು ಮಾರ್ಮಿಕವಾಗಿ ಹೇಳಿರುವುದು ಸಹ ಚರ್ಚೆಯನ್ನು ಹುಟ್ಟು ಹಾಕಿದೆ.ಹಲವು ಸಚಿವರು, ಶಾಸಕರುಗಳು, ಮುಖ್ಯಮಂತ್ರಿಗಳ ಮಾತಿಗೆ ಪ್ರತಿಕ್ರಿಯಿಸಿದ್ದು, ಹೈ ಕಮಾಂಡ್ ತೀರ್ಮಾನವೇ ಅಂತಿಮ. ಎಂಬ ಅರ್ಥದಲ್ಲಿ ಮಾತನಾಡುವ ಮೂಲಕ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಂಚಿಕೆ ಆಗುತ್ತದೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸದೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿರುವುದು ಕಾಂಗ್ರೆಸ್‌ನಲ್ಲಿ ಮುಂದಿನ ದಿನಗಳಲ್ಲಿ ಏನು ಬೇಕಾದರು ಆಗಬಹುದು ಎಂಬ ಸುಳಿವನ್ನು ನೀಡಿದ್ದಾರೆ.

ಹೈಕಮಾಂಡ್ ಕಟ್ಟಪ್ಪಣೆಯ ನಂತರವೂ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಸಚಿವರ, ಶಾಸಕರ ಹೇಳಿಕೆಗಳು ಮುಂದುವರೆದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಕಾಂಗ್ರೆಸ್‌ನಲ್ಲಿ ಹಲವರು ಪರ-ವಿರೋಧ ಹೇಳಿಕೆಗಳನ್ನು ನೀಡುತ್ತಿರುವುದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಹುದ್ದೆ ಕದನ ಮತ್ತಷ್ಟು ಜೋರಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.ಎರಡು ದಿನಗಳ ಹಿಂದೆಯಷ್ಟೇ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸುರ್ಜೇವಾಲ ಮತ್ತು ಕೆ.ಸಿ. ವೇಣುಗೋಪಾಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕೂರಿಸಿಕೊಂಡು 2 ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿ, ಯಾರೂ ಬಹಿರಂಗವಾಗಿ ಅಧಿಕಾರ ಹಂಚಿಕೆಯಿಂದ ಹಿಡಿದು, ಪಕ್ಷದ ಯಾವುದೇ ವಿಚಾರವಾಗಿ ಮಾತನಾಡಬಾರದು ಎಂದು ಹೇಳಿದ್ದರೂ ಅದಕ್ಕೆ ಯಾರೂ ಸೊಪ್ಪು ಹಾಕದೆ ಅಧಿಕಾರ ಹಂಚಿಕೆಯ ಬಗ್ಗೆ ಮಾತನ್ನು ಮುಂದುವರೆಸಿದ್ದಾರೆ.ಹೈಕಮಾಂಡ್ ಮಾತಿಗೆ ಯಾರೂ ಕಿಮ್ಮತ್ತು ಕೊಟ್ಟಂತೆ ಕಾಣುತ್ತಿಲ್ಲ.

ವರಿಷ್ಠರು ಎಚ್ಚರಿಕೆ ನೀಡಿದ ಬೆನ್ನಲ್ಲೆ ಮತ್ತೆ ಮುಖ್ಯಮಂತ್ರಿ ಅಧಿಕಾರ ಹಂಚಿಕೆ ವಿಚಾರ ಚರ್ಚೆಗೆ ಗ್ರಾಸವಾಗಿರುವುದು ಕಾಂಗ್ರೆಸ್ ಹೈಕಮಾಂಡ್‌ಗೂ ಮುಜುಗರ ತಂದಿದ್ದು, ಹೈಕಮಾಂಡ್ ಯಾವ ಸಂದೇಶ ರವಾನಿಸುತ್ತದೆ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ನಾನು ಹೈಕಮಾಂಡ್ ಮಾತನ್ನು ಕೇಳುತ್ತೇನೆ: ಡಿಕೆಶಿ 

ಮುಂದಿನ 5 ವರ್ಷ ನಾನೇ ಸಿಎಂ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಅಷ್ಟೇನೂ ತೀಕ್ಷ್ಣವಾಗಿ ಪ್ರತಿಕ್ರಿಯಿಸದೆ ನಾನು ಹೈಕಮಾಂಡ್ ಮಾತನ್ನು ಕೇಳುತ್ತೇನೆ. ಪಕ್ಷದಲ್ಲಿ ಯಾವುದೇ ಅಸಮಾಧಾನ, ಅತೃಪ್ತಿ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರೂ ಸಹ ಅವರು ಸುಮ್ಮನೆ ಕೂರುವವರಲ್ಲ. ಹೈಕಮಾಂಡ್ ಮಟ್ಟದಲ್ಲಿ ಏನೆಲ್ಲಾ ಮಾಡುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತುಗಳಿಗೆ ಬಹಿರಂಗವಾಗಿ ಏನನ್ನು ಡಿ.ಕೆ. ಶಿವಕುಮಾರ್ ಹೇಳಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅವರ ನಡೆ ಯಾವ ರೀತಿ ಇರಲಿದೆ ಎಂಬ ಬಗ್ಗೆಯೂ ಚರ್ಚೆ ನಡೆದಿದ್ದು, ಶಿವಕುಮಾರ್ ನಡೆ ಸದ್ಯಕ್ಕೆ ನಿಗೂಢವಾಗಿರುವಂತೆ ಕಾಣುತ್ತಿದೆ.

Related Articles

Back to top button
error: Content is protected !!