ಕೃಷಿ

ಕೃಷಿ ಬಳಕೆ ಪಂಪ್‌ಸೆಟ್‌ಗಳಿಗೆ ಆರ್‌ಆರ್‌ ಸಂಖ್ಯೆ,ಆಧಾರ್‌ ಜೋಡಿಸಿ ಆದೇಶ: ರೈತರ ಆಕ್ರೋಶ 

Views: 101

ಕೃಷಿ ಪಂಪ್‌ಸೆಟ್‌ಗಳ ಆರ್‌ಆರ್‌ ಸಂಖ್ಯೆ ಹಾಗೂ ರೈತರ ಆಧಾರ್‌ ಸಂಖ್ಯೆ ಜೋಡಣೆಗೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ನೀಡಿದ್ದ ಗಡುವು ಸನ್ನಿಹಿತವಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಧಾರ್‌ ಜೋಡಣೆಗೆ ಕ್ರಮ ಕೈಗೊಳ್ಳುವಂತೆ ಎಲ್ಲ ವಿದ್ಯುತ್‌ ಸರಬರಾಜು ಕಂಪೆನಿಗಳಿಗೆ ಸರಕಾರ ಆದೇಶಿಸಿದೆ. ಇನ್ನು 2 ತಿಂಗಳಲ್ಲಿ ಈ ಪ್ರಕ್ರಿಯೆ ಮುಕ್ತಾಯವಾಗಬೇಕಾಗಿದೆ.

ವಿದ್ಯುತ್‌ ಬೇಡಿಕೆ ಹೆಚ್ಚುತ್ತಿರುವುದರಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್‌ ಬಳಕೆ ಉತ್ತೇಜಿಸಲು ಕ್ರಮ ಕೈಗೊಳ್ಳುವಂತೆಯೂ ಆದೇಶಿಸಲಾಗಿದೆ. ಅದ್ಕಕಾಗಿ ಐಪಿ ಸೆಟ್‌ ಫೀಡರ್‌ಗಳನ್ನೂ ಸೌರ ವಿದ್ಯುತ್‌ಗೆ ಅಳವಡಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ ಒಟ್ಟು 34.17 ಲಕ್ಷ ಐಪಿ ಸೆಟ್‌ಗಳಿದ್ದು, 20 ಸಾವಿರ ಮೆಗಾವ್ಯಾಟ್‌ಗೂ ಅಧಿಕ ವಿದ್ಯುತ್‌ ಬಳಕೆಯಾಗುತ್ತಿದೆ. ವಿದ್ಯುತ್‌ ಬೇಡಿಕೆ ಹೆಚ್ಚಿರುವುದರಿಂದ ಗುಣಮಟ್ಟದ ವಿದ್ಯುತ್‌ ಪೂರೈಕೆಯೂ ಸವಾಲಾಗಿ ಪರಿಣಮಿಸಿದ್ದು, ಸೌರವಿದ್ಯುತ್‌ ಬಳಕೆ ಅನಿವಾರ್ಯವಾಗುತ್ತಿದೆ.

ಎಲ್ಲ ಕೃಷಿ ಪಂಪ್‌ಸೆಟ್‌ಗಳಿಗೂ ರೈತರ ಆಧಾರ್‌ ಸಂಖ್ಯೆ ಜೋಡಣೆ ಗೊಳಿಸಲು ಮೇ ತಿಂಗಳಿನಲ್ಲಿ ಕೆಇಆರ್‌ಸಿ ಆದೇಶಿಸಿ, 6 ತಿಂಗಳ ಗಡುವು ವಿಧಿಸಿತ್ತು. ಈಗಾಗಲೇ ನಾಲ್ಕು ತಿಂಗಳು ಮುಗಿದಿದೆ.

ಕೂಡಲೇ ದೃಢ ಪಡಿಸಿಕೊಂಡು ಮೂಲಸೌಕರ್ಯ ಒದಗಿಸಲು ಟೆಂಡರ್‌ ಕರೆಯುವಂತೆ ಆದೇಶಿಸಿದೆ.

ರೈತರ ಆಕ್ರೋಶ 

ರಾಜ್ಯಾದ್ಯಂತ ಬರ ಆವರಿಸಿದೆ. ಇದರ ನಡುವೆ ರಾಜ್ಯ ಸರಕಾರ ಹಾಗೂ ಇಂಧನ ಇಲಾಖೆ ರೈತರಿಗೆ ಮತ್ತೊಂದು ಶಾಕ್‌ ನೀಡಲು ಮುಂದಾಗಿದೆ. ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ರಾಜ್ಯ ಸರಕಾರ ಕೃಷಿ ಪಂಪ್‌ ಸೆಟ್‌ಗಳಿಗೆ ಉಚಿತ ವಿದ್ಯುತ್‌ ಪೂರೈಸುತ್ತಿದೆ. ಆದರೆ, ಈ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಕೆ ಸಂಬಂಧ ಆಧಾರ್‌ ಕಾರ್ಡ್‌ ಸೇರಿದಂತೆ ಇತರೆ ಮಾಹಿತಿ ಕಲೆ ಹಾಕಲಾಗುತ್ತಿರುವುದು ರೈತ ವಲಯದ ತಲೆಬಿಸಿಗೆ ಕಾರಣವಾಗಿದೆ.

ಕಳೆದ ಮಾರ್ಚ್ ತಿಂಗಳಿನಲ್ಲಿಕರ್ನಾಟಕ ವಿದ್ಯುತ್‌ ನಿಯಂತ್ರಣಾ ಆಯೋಗ(ಕೆಇಆರ್‌ಸಿ)ವು ಬೆಸ್ಕಾಂ ಸೇರಿದಂತೆ ವಿದ್ಯುತ್‌ ವಿತರಣಾ ಕಂಪನಿಗಳಿಗೆ ಆರು ತಿಂಗಳೊಳಗಾಗಿ ಪ್ರತಿ ಪಂಪ್‌ಸೆಟ್‌ನ ಆರ್‌.ಆರ್‌ ನಂಬರ್‌ ಅನ್ನು ರೈತರ ಆಧಾರ್‌ ಕಾರ್ಡ್‌ಗೆ ಜೋಡಣೆ ಮಾಡುವಂತೆ ಸೂಚನೆ ನೀಡಿದೆ.

ರಾಜ್ಯದ ಎಲ್ಲಾವಿದ್ಯುತ್‌ ಪೂರೈಕೆ ಕಂಪನಿಗಳು ಆಧಾರ್‌ ಕಾರ್ಡ್‌ ಜೋಡಣೆ ಕೆಲಸದಲ್ಲಿತಲ್ಲೀನವಾಗಿರುವುದು ರೈತ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸರಕಾರದ ಈ ನಿರ್ಧಾರ ಕೃಷಿ ಪಂಪ್‌ ಸೆಟ್‌ಗಳಿಗೆ ಮೀಟರ್‌ ಅಳವಡಿಕೆ ಪ್ರಥಮ ಹೆಜ್ಜೆ ಎಂಬ ಆರೋಪ ಕೇಳಿ ಬಂದಿದೆ.

Related Articles

Back to top button
error: Content is protected !!