ಬರ ಅಧ್ಯಯನ ಆರಂಭ 13 ಜಿಲ್ಲೆಗಳಿಗೆ ಕೇಂದ್ರದ ತಂಡ ಭೇಟಿ ; ವಸ್ತುಸ್ಥಿತಿ ಪರಿಶೀಲನೆ ಕಾರ್ಯಕ್ಕೆ ಚಾಲನೆ

Views: 0
ರಾಜ್ಯದಲ್ಲಿ ಮಳೆ ಕೈಕೊಟ್ಟಿರುವುದರಿಂದ ಬರ ಪರಿಸ್ಥಿತಿ ತಲೆದೋರಿದ್ದು, ಈ ಹಿನ್ನೆಲೆಯಲ್ಲಿ ರೈತಾಪಿವರ್ಗ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮೂರು ತಂಡಗಳು ಇಂದು ರಾಜ್ಯಕ್ಕೆ ಭೇಟಿ ನೀಡಿದ್ದು, ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲನೆ ನಡೆಸುವ ಕಾರ್ಯಕ್ಕೆ ಚಾಲನೆ ನೀಡಿದೆ.
13 ಜಿಲ್ಲೆಗಳಲ್ಲಿ ಕೇಂದ್ರದ ಬರ ಅಧ್ಯಯನ ತಂಡ ತೆರಳಿ ಮಳೆ ಕೊರತೆ, ಬೆಳೆ ನಷ್ಟವಾಗಿರುವ ಬಗ್ಗೆ ರೈತರಿಂದ ಮಾಹಿತಿ ಸಂಗ್ರಹಿಸಿದೆ.

ಮೂರು ತಂಡಗಳಲ್ಲಿ ಒಟ್ಟು 10 ಸದಸ್ಯರ ಅಧಿಕಾರಿಗಳ ತಂಡ ರಾಜ್ಯಕ್ಕೆ ಭೇಟಿ ನೀಡಿದ್ದು, ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರಕ್ಕೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಂಡಿತು.
ಬಳಿಕ ವಿಧಾನಸೌಧದ ಕೊಠಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಭೇಟಿ ಮಾಡಿತು.
ಈ ವೇಳೆ ರಾಜ್ಯದಲ್ಲಿ ಮಳೆ ಕೈಕೊಟ್ಟು ಬರಪರಿಸ್ಥಿತಿ ಉಂಟಾಗಿರುವ ಬಗ್ಗೆ ಕೇಂದ್ರದ ಅಧ್ಯಯನ ತಂಡಕ್ಕೆ ಮುಖ್ಯಮಂತ್ರಿಗಳು ವಿಸ್ತೃತ ಮಾಹಿತಿ ನೀಡಿದರು.
ಇಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ಕುಮಾರ್ ಸಾಹೋ ಅವರ ನೇತೃತ್ವದ ಮೊದಲ ತಂಡ ರಾಜ್ಯಕ್ಕೆ ಆಗಮಿಸಿ ಇಂದು ಬೆಳಗಾವಿಗೆ ತೆರಳಿ ನಾಳೆ ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಬರಪರಿಸ್ಥಿತಿಯನ್ನು ಪರಿಶೀಲನೆ ನಡೆಸಲಿದೆ.
ಅ.7 ರಂದು ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಸಂಕಷ್ಟಕ್ಕೆ ಗುರಿಯಾಗಿರುವ ರೈತಾಪಿ ವರ್ಗವನ್ನು ಭೇಟಿ ಮಾಡಿ ಅವರಿಂದ ಅಹವಾಲು ಸ್ವೀಕರಿಸಲಿದೆ.
ಮತ್ತೊಂದು ತಂಡ ನಾಳೆ ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಿಗೆ ಪ್ರವಾಸಕೈಗೊಂಡು ಅಧ್ಯಯನ ನಡೆಸಲಿದೆ.
ಅ. 7ರಂದು ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಿಗೆ ಭೇಟಿ ನೀಡಿದ ನಂತರ ಅ.8ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಗೂ ತೆರಳಿ ಬರ ಪರಿಸ್ಥಿತಿ ಅಧ್ಯಯನ ನಡೆಸಲಿದ್ದಾರೆ.
13 ಜಿಲ್ಲೆಗಳಿಗೆ ಭೇಟಿ ನೀಡಲಿರುವ ಕೇಂದ್ರದ ಬರ ಅಧ್ಯಯನ ತಂಡದ ಅಧಿಕಾರಿಗಳಿಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಲಿದ್ದು, ಮಳೆ ಕೊರತೆಯಿಂದ ಉಂಟಾಗಿರುವ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಲಿದ್ದಾರೆ.
ಮೊದಲ ತಂಡದಲ್ಲಿ ಎಣ್ಣೆ ಬೀಜಗಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಡಾ. ಜಿ. ಪೊನ್ನುಸ್ವಾಮಿ, ವೆಚ್ಚ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕ ಮಹೇಂದ್ರ ಚಂಡೆಲಯ ಅವರೊಂದಿಗೆ ಇತರ ಸದಸ್ಯರು ಭೇಟಿ ನೀಡಲಿದ್ದಾರೆ.
2ನೇ ತಂಡದಲ್ಲಿ ಕೇಂದ್ರದ ಕುಡಿಯುವ ನೀರು ಹಾಗೂ ಸ್ವಚ್ಛತಾ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ. ರಾಜಶೇಖರ್, 2ನೇ ತಂಡದ ನೇತೃತ್ವ ವಹಿಸಿದ್ದಾರೆ.
ಕೇಂದ್ರದ ಜಲ ಆಯೋಗದ ನಿರ್ದೇಶಕ ಅಶೋಕ್ಕುಮಾರ್ ೩ನೇ ತಂಡದ ನೇತೃತ್ವ ವಹಿಸಿದ್ದಾರೆ. ಈ ಮೂರು ತಂಡಗಳು ಬರಪೀಡಿತ ಜಿಲ್ಲೆಗಳಿಗೆ ಭೇಟಿಕೊಟ್ಟು ಅ.9 ರಂದು ಬೆಂಗಳೂರಿಗೆ ವಾಪಸ್ಸಾಗಿ ಅಧಿಕಾರಿಗಳಿಂದ ವಿವರಣೆ ಪಡೆದು ದೆಹಲಿಗೆ ವಾಪಸ್ ತೆರಳಲಿದೆ.
ಈ ವೇಳೆ ರಾಜ್ಯಸರ್ಕಾರ ಬರಪರಿಸ್ಥಿತಿಯಿಂದಾಗಿ ರಾಜ್ಯ ಸಂಕಷ್ಟಕ್ಕೆ ಸಿಲುಕಿದ್ದು, ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಅನುದಾನ ನೀಡಬೇಕೆಂದು ಮನವಿ ಮಾಡಲಿದ್ದಾರೆ. ಈ ಬರ ಅಧ್ಯಯನ ತಂಡ ದೆಹಲಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ ಬಳಿಕ ರಾಜ್ಯದಲ್ಲಿ ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಅನುದಾನ ಬಿಡುಗಡೆ ಮಾಡುವ ನಿರೀಕ್ಷೆ ಇದೆ.






