ಪಿಯುಸಿಗೆ ಆಂತರಿಕ ಅಂಕ ಹಂಚಿಕೆ, ಪ್ರಶ್ನೆ ಪತ್ರಿಕೆ ಹೊಸ ರೂಪ: ಇಲ್ಲಿದೆ ಮಾಹಿತಿ – ಕನ್ನಡ ಕರಾವಳಿ

Views: 0
ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಅಂಕ ಹಂಚಿಕೆ ಬದಲಾವಣೆ ಹಿನ್ನೆಲೆಯಲ್ಲಿ ಈ ಸಾಲಿನಿಂದ ಪ್ರಶ್ನೆ ಪತ್ರಿಕೆಯ ಶೈಲಿಯು ಬದಲಾಗಲಿದ್ದು, ಆಂತರಿಕ ಅಂಕ ಹಂಚಿಕೆಯ ಸ್ವರೂಪ ಅನುಷ್ಠಾನಕ್ಕೆ ಸಿದ್ಧವಾಗುತ್ತಿದೆ.
ಈ ವರ್ಷದಿಂದ ಪಿಯುಸಿಯ ಪ್ರಾಯೋಗಿಕ ಪರೀಕ್ಷೆ ಹೊಂದಿರದ ವಿಷಯಗಳಿಗೆ 80 ಅಂಕಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ ಮತ್ತು 20 ಅಂಕ ಆಂತರಿಕವಾಗಿ ನೀಡಲಾಗುತ್ತದೆ. ಇದಕ್ಕಾಗಿ ವಿವಿಧ ಪರೀಕ್ಷೆಗಳ ಸರಾಸರಿ ಮೂಲಕ ಗರಿಷ್ಠ 10 ಅಂಕ ಹಾಗೂ ಪ್ರಾಜೆಕ್ಟ್ ಮತ್ತು ಅಸೈನ್ಮೆಂಟ್ ಮೂಲಕ 10 ಅಂಕ ನೀಡಲಾಗುತ್ತದೆ.
ಆಂತರಿಕ ಮೌಲ್ಯಮಾಪನ ವಿಧಾನಗಳ ಬಗ್ಗೆ ಮಾರ್ಗದರ್ಶಿ ಕೈಪಿಡಿ ಈಗಾಗಲೇ ತಲುಪಿದೆ.80 ಅಂಕಗಳಿಗೆ ಸರಿಹೊಂದುವ ಪ್ರಶ್ನೆಗಳ ನೀಲ ನಕ್ಷೆ ಮತ್ತು ಮಾದರಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗುತ್ತಿದೆ.
ಬಹು ಆಯ್ಕೆ,ಬಿಟ್ಟ ಪದ ತುಂಬಿಸಿ, ಹೊಂದಿಸಿ ಬರೆಯಿರಿ, ಒಂದು ಅಂಕದ ಪ್ರಶ್ನೆ ಎಂದಿನಂತೆ ಇರುವ ಸಾಧ್ಯತೆ ಇದೆ. ಆದರೆ 5 ಮತ್ತು 10 ಅಂಕದ ಪ್ರಶ್ನೆಗಳಲ್ಲಿ ಬದಲಾವಣೆ ಇರಲಿದೆ. ಪ್ರಸ್ತುತ ಇರುವ ಕಿರು ಪರೀಕ್ಷೆಗಳು 40 ಹಾಗೂ ಮಧ್ಯವಾರ್ಷಿಕ ಪರೀಕ್ಷೆ 80 ಅಂಕಗಳಿಗೆ ನಿಗದಿಯಾಗಿದೆ.
ಆಯಾ ಜಿಲ್ಲೆಗಳ ವಿಷಯವಾರು ಉಪನ್ಯಾಸಕರ ವೇದಿಕೆಯಲ್ಲಿ ಪ್ರಾಜೆಕ್ಟ್ ಅಥವಾ ಅಸೈನ್ಮೆಂಟ್ ಗಳ ಶೀರ್ಷಿಕೆಗಳನ್ನು ಸಿದ್ಧಪಡಿಸಿ ಪಟ್ಟಿಯನ್ನು ವಿದ್ಯಾರ್ಥಿಗಳಿಗೆ ನೀಡಬೇಕಿದೆ. ಸದ್ಯ ಎಲ್ಲಾ ಜಿಲ್ಲೆಗಳಲ್ಲಿ ಈ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ. ಮಧ್ಯಾವಧಿ ಪರೀಕ್ಷೆಯ ಬಳಿಕ ಇದು ವಿದ್ಯಾರ್ಥಿಗಳ ಕೈಗೆ ಸೇರಲಿದೆ.
ಖಾಸಗಿ ವಿದ್ಯಾರ್ಥಿಗಳಿಗೆ ಅಂಕ ಹೇಗೆ?
ರೆಗ್ಯುಲರ್ ವಿದ್ಯಾರ್ಥಿಗಳಿಗೆ ಮಾತ್ರ 80: 20 ನಿಯಮ ಇರುತ್ತದೆ. ಪುನರಾವರ್ತಿತ ಖಾಸಗಿ ವಿದ್ಯಾರ್ಥಿಗಳಿಗೆ ಇದು ಅನ್ವಯವಾಗುವುದಿಲ್ಲ.
ಏಕಕಾಲದಲ್ಲಿ ಈ ಎಲ್ಲಾ ಪರೀಕ್ಷೆ ನಡೆಯಬೇಕಿರುವುದರಿಂದ ಅವರಿಗೆ ಪ್ರತ್ಯೇಕ ನೂರು ಅಂಕಗಳ ಪ್ರಶ್ನೆ ಪತ್ರಿಕೆ ನೀಡಲಾಗುತ್ತಯೇ? ಅಥವಾ ಎಲ್ಲರಿಗೂ ನೂರು ಅಂಕದ ಪ್ರಶ್ನೆ ಪತ್ರಿಕೆ ನೀಡಿ ರೆಗುಲರ್ ವಿದ್ಯಾರ್ಥಿಗಳಿಗೆ ಆಯ್ಕೆ ನೀಡಲಾಗುತ್ತದೆಯೇ? ಎಂಬುದನ್ನು ಇನ್ನಷ್ಟೇ ತಿಳಿಯಬೇಕಾಗಿದೆ.
ಆಂತರಿಕ ಅಂಕಗಳಿಗೆ ವಿಶೇಷ ಗಮನ
ಸೂಕ್ತ ಅಸೈನ್ ಮೆಂಟ್ ಅಥವಾ ಪ್ರಾಜೆಕ್ಟ್ ಗಳನ್ನು ವಿದ್ಯಾರ್ಥಿಗಳಿಗೆ ನೀಡಿ 10 ಅಂಕಗಳಿಗೆ ಮೌಲ್ಯಮಾಪನ ಮಾಡಬೇಕಾಗಿದೆ. ಅಸೈನ್ಮೆಂಟ್ ಅಥವಾ ಪ್ರಾಜೆಕ್ಟ್ ಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಪಕ್ಷಪಾತವಿಲ್ಲದೆ ಅಂಕ ನೀಡಬೇಕಾಗಿದೆ. ಅಂಕ ನೀಡಿರುವ ಬಗ್ಗೆ ಎಲ್ಲಾ ದಾಖಲೆಗಳನ್ನು ಪರೀಕ್ಷೆಯಾದ ನಾಲ್ಕು ತಿಂಗಳವರೆಗೆ ಕಾಯ್ದಿರಿಸಬೇಕಾಗುತ್ತದೆ.ಹೀಗಾಗಿ ಆಂತರಿಕ ಅಂಕ ನೀಡುವಾಗ ಹೆಚ್ಚು ಗಮನಹರಿಸಬೇಕು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಆಂತರಿಕ ಅಂಕ ಹಂಚಿಕೆ ವಿಧಾನ ಹೇಗೆ?
ಎರಡನೇ ಕಿರು ಪರೀಕ್ಷೆ ಹಾಗೂ ಮಧ್ಯವಾರ್ಷಿಕ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳಲ್ಲಿ ಉತ್ತಮವಾದ ಎರಡನ್ನು 10 ಅಂಕಗಳಿಗೆ ಪರಿವರ್ತಿಸಿ ಅವುಗಳ ಸರಾಸರಿ ಅಂಕಗಳನ್ನು ನೀಡಲಾಗುತ್ತದೆ.
ಕಾಲೇಜು ಹಂತದಲ್ಲಿ ಪ್ರಾಜೆಕ್ಟ್ ಹಾಗೂ ಅಸೈನ್ಮೆಂಟ್ ಅಂಕಗಳು, ಬರವಣಿಗೆ ವಿಭಾಗಕ್ಕೆ 5 ಅಂಕಗಳು ಮತ್ತು ಪ್ರಸ್ತುತಿಗೆ ಐದು ಅಂಕಗಳು ಮತ್ತು ಸಂದರ್ಶನಕ್ಕೆ 2 ಅಂಕಗಳನ್ನು ನಿಗದಿಪಡಿಸಲಾಗಿದೆ.
ಪ್ರೆಸೆಂಟೇಷನ್ ಬಗ್ಗೆ ಗೊಂದಲ?
ಪಿಯುಸಿ ಗೆ ಒಂದು ಶೈಕ್ಷಣಿಕ ವರ್ಷದಲ್ಲಿ ಪಾಠಕ್ಕಾಗಿ 120 ತಾಸು ಮೀಸಲಿದೆ. ಇದರಲ್ಲಿ ಬೋಧನೆ ಮುಗಿಸುವುದೇ ಸವಾಲು.
ಇದರ ಮಧ್ಯೆ ಹೊಸ ಕ್ರಮದಂತೆ ಆಂತರಿಕ ಅಂಕಗಳ ಪೈಕಿ 5 ಅಂಕಗಳನ್ನು ಪ್ರೆಸೆಂಟೇಷನ್ ಹಾಗೂ ಸಂದರ್ಶನಕ್ಕೆ ಮೀಸಲಾಗಿರಲಾಗಿದೆ.
ಒಬ್ಬ ವಿದ್ಯಾರ್ಥಿಯು ಅರ್ಧ ತಾಸು ತರಗತಿಯಲ್ಲಿ ಪ್ರೆಸೆಂಟೇಷನ್/ ಸಂದರ್ಶನ ನೀಡಿದರೆ 80 ವಿದ್ಯಾರ್ಥಿಗಳು ಇರುವ ತರಗತಿಯಲ್ಲಿ ಎಷ್ಟು ತಾಸುಗಳನ್ನು ಇದಕ್ಕಾಗಿ ಮೀಸಲಿಡಬೇಕು ಎಂಬುವುದು ಸದ್ಯದ ಪ್ರಶ್ನೆ ?
ಒಂದು ವೇಳೆ ಕನಿಷ್ಠ ಅಲ್ಲಿ ಅರ್ಧ ತಾಸು ಪ್ರೆಸೆಂಟೇಷನ್ ಇಲ್ಲವಾದರೆ ಇದರ ಔಚಿತ್ಯವಾದರೂ ಏನು? ಎಂಬುದರ ಬಗ್ಗೆ ಅಧ್ಯಾಪಕರು ಪ್ರಶ್ನೆ ಹಾಕಿದ್ದಾರೆ.