ಈ ವರ್ಷದಿಂದಲೇ 9,11ನೇ ತರಗತಿಗೆ ಪಬ್ಲಿಕ್ ಪರೀಕ್ಷೆ: ಪರೀಕ್ಷಾ ನಿಯಮ ಮತ್ತು ಮಾಹಿತಿ ಇಲ್ಲಿದೆ

Views: 9
ಬೆಂಗಳೂರು: ಶಿಕ್ಷಣ ಇಲಾಖೆಯು 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೂ ಪಬ್ಲಿಕ್ ಪರೀಕ್ಷೆ ನಡೆಸುವ ಸಂಬಂಧ ಅಧಿಕೃತ ಆದೇಶ ಪ್ರಕಟಿಸಿದೆ.
ಈಗಾಗಲೇ 5, 8, 10 ಮತ್ತು 12ನೇ ತರಗತಿಗೆ ವಾರ್ಷಿಕ ಪರೀಕ್ಷೆಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವತಿಯಿಂದ ನಡೆಸಲಾಗುತ್ತಿದೆ. ಅದೇ ರೀತಿ 9ನೇ ತರಗತಿ ವಿದ್ಯಾರ್ಥಿಗಳಿಗೂ ಸಂಕಲನಾತ್ಮಕ ಮೌಲ್ಯಮಾಪನ-2 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ (2023-24) ನಡೆಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ವಾರ್ಷಿಕ ಪರೀಕ್ಷೆಯನ್ನು ಮಂಡಳಿ ವತಿಯಿಂದಲೇ ನಡೆಸುವುದರಿಂದ ಎಲ್ಲ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಪರಿಶೀಲಿಸುವ ಮೂಲಕ ವಿದ್ಯಾರ್ಥಿಗಳ ಪ್ರಗತಿಯನ್ನು ಬಲವರ್ಧನೆಗೊಳಿಸಲು ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಪರೀಕ್ಷಾ ಷರತ್ತುಗಳೇನು?
ಮಂಡಳಿಯು ಪರೀಕ್ಷೆಯನ್ನು ಶಾಲಾ ಮತ್ತು ಕಾಲೇಜು ಹಂತದಲ್ಲಿಯೇ ನಡೆಸಲಾಗುವುದು. ಪ್ರಶ್ನೆಪತ್ರಿಕೆಗಳನ್ನು ಮಂಡಳಿ ವತಿಯಿಂದಲೇ ಸಿದ್ಧಪಡಿಸಿ 9ನೇ ತರಗತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್‌ನಲ್ಲಿ ಮತ್ತು 11ನೇ ತರಗತಿಗೆ ಜಿಲ್ಲಾ ಉಪ ನಿರ್ದೇಶಕರು (ಪಿಯು) ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಬಳಿಕ ಪರೀಕ್ಷಾ ಕೇಂದ್ರಗಳಿಗೆ ರವಾನೆ ಮಾಡಬೇಕಾಗುತ್ತದೆ.
ಸಮೀಪದ ಶಾಲೆಗಳ ಶಿಕ್ಷಕರನ್ನು ಪರೀಕ್ಷಾ ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಲಾಗುವುದು. 11ನೇ ತರಗತಿಗೆ ಆಯಾ ಕಾಲೇಜಿನ ಉಪನ್ಯಾಸಕರನ್ನೇ ಕೊಠಡಿ ಮೇಲ್ವಿಚಾರಕನ್ನಾಗಿ ನೇಮಿಸಲಾಗುತ್ತದೆ.
9ನೇ ತರಗತಿ ಮೌಲ್ಯಮಾಪನವನ್ನು ತಾಲ್ಲೂಕು ಹಂತದಲ್ಲಿ ಮತ್ತು 11ನೇ ತರಗತಿ ಮೌಲ್ಯಮಾಪನವನ್ನು ಕಾಲೇಜುಗಳಲ್ಲಿಯೇ ನಿರ್ವಹಿಸುವಂತೆ ಸೂಚಿಸಲಾಗಿದೆ.
9ನೇ ತರಗತಿಯ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವಂತಿಲ್ಲ. ಪಲಿತಾಂಶವನ್ನು ಸಂಬಂಧಿಸಿದ ವಿದ್ಯಾರ್ಥಿ ಮತ್ತು ಪಾಲಕರಿಗೆ ಮಾತ್ರ ನೀಡುವುದು. 11ನೇ ತರಗತಿ ವಿದ್ಯಾರ್ಥಿ ಅನುತ್ತೀರ್ಣರಾದಲ್ಲಿ ಪೂರಕ ಪರೀಕ್ಷೆಯನ್ನು ಆಯಾ ಕಾಲೇಜು ಹಂತದಲ್ಲಿ ನಡೆಸುವವಂತೆ ಆದೇಶದಲ್ಲಿ ತಿಳಿಸಿದೆ.