ಇತರೆ

ರಾಜ್ಯದಲ್ಲಿ ವಿಪಕ್ಷ ನಾಯಕನ ಆಯ್ಕೆ ಮಾಡದ ಬಿಜೆಪಿ: ಲೀಗಲ್ ನೋಟಿಸ್ 

Views: 0

ಬೆಂಗಳೂರು: ಚುನಾವಣೆ ನಡೆದು 100 ದಿನಗಳು ಕಳೆದರೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡದಿರುವುದನ್ನು ಆಕ್ಷೇಪಿಸಿ ವಕೀಲ ಎನ್‌ ಪಿ ಅಮೃತೇಶ್‌ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲು ಮತ್ತು ಮುಖ್ಯ ಕಾರ್ಯದರ್ಶಿಗೆ ಲೀಗಲ್‌ ನೋಟಿಸ್‌ ನೀಡಿದ್ದಾರೆ.

ನೋಟಿಸ್‌ ದೊರೆತ ಹತ್ತು ದಿನಗಳ ಒಳಗೆ ವಿಪಕ್ಷ ನಾಯಕನ ಆಯ್ಕೆ ಮಾಡಲು ಶಾಸಕಾಂಗ ಸಭೆ ಕರೆಯುವಂತೆ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರಿಗೆ ನಿರ್ದೇಶಿಸಬೇಕು. ವಿಪಕ್ಷ ನಾಯಕನ ಆಯ್ಕೆಯನ್ನು ವಿಳಂಬ ಮಾಡಿರುವುದಕ್ಕೆ ಕರ್ನಾಟಕದ ಜನತೆಯ ಕ್ಷಮೆ ಕೋರಬೇಕು ಎಂದು ನೋಟಿಸ್‌ನಲ್ಲಿ ಆಗ್ರಹಿಸಲಾಗಿದೆ. ಒಂದೊಮ್ಮೆ ಇದರಲ್ಲಿ ವಿಫಲವಾದರೆ ಈ ಸಂಬಂಧ ಸಕ್ಷಮ ಪ್ರಾಧಿಕಾರ, ನ್ಯಾಯಾಲಯದ ಮೆಟ್ಟಿಲೇರುವುದು ಅನಿವಾರ್ಯವಾಗಲಿದೆ ಎಂದು ಲೀಗಲ್‌ ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.

ವಿಧಾನಸಭೆಯ ಪ್ರತಿಪಕ್ಷದ ನಾಯಕನಿಗೆ ಹಲವು ಅಧಿಕಾರ ಮತ್ತು ಕರ್ತವ್ಯಗಳಿವೆ. ಲೋಕಾಯುಕ್ತ, ಉಪಲೋಕಾಯುಕ್ತ, ಕೆಪಿಎಸ್‌ಸಿ ಸದಸ್ಯರು, ಆರ್‌ಟಿಐ ಆಯುಕ್ತರು, ಗ್ರಾಹಕರ ಒಕ್ಕೂಟ, ಆಡಳಿತಾತ್ಮಕ ನ್ಯಾಯ ಮಂಡಳಿ ಇತ್ಯಾದಿ ಸಾಂವಿಧಾನಿಕ ನೇಮಕಾತಿಗಳಲ್ಲಿ ವಿಪಕ್ಷ ನಾಯಕ ಭಾಗವಹಿಸಬೇಕು

ಚುನಾಯಿತ ಸರ್ಕಾರ ಸಕ್ರಿಯವಾಗಿ ಕೆಲಸ ಮಾಡದಿದ್ದಾಗ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಜನರ ಧ್ವನಿಯಾಗಿ ಕೆಲಸ ಮಾಡಬೇಕಾಗುತ್ತದೆ. ಸರ್ಕಾರದಿಂದ ದುರ್ಬಳಕೆ, ದುರಾಚಾರ, ಅಧಿಕಾರ ದುರ್ಬಳಕೆ ಇತ್ಯಾದಿ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಧ್ವನಿ ಎತ್ತುವ ಅಧಿಕಾರ ಹೊಂದಿದ್ದಾರೆ. ವಿಪಕ್ಷ ನಾಯಕನನ್ನು ಆಯ್ಕೆ ಮಾಡದೇ ಇರುವ ಮೂಲಕ ಬಿಜೆಪಿಯು ಜನರ ಧ್ವನಿಯಾಗುವಲ್ಲಿ ವಿಫಲವಾಗಿದೆ ಎಂದು ದೂರಲಾಗಿದೆ.

ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕನಿಗೆ ತನ್ನದೇ ಆದ ಮಾನ್ಯತೆ ಇದೆ. ವಿಪಕ್ಷ ನಾಯಕನ ಹುದ್ದೆಗೆ ಸಂಪುಟ ದರ್ಜೆ ಸ್ಥಾನಮಾನ ಇದ್ದು, ಮಹತ್ವದ ಜವಾಬ್ದಾರಿಗಳೂ ಇವೆ. ಆಡಳಿತ ಪಕ್ಷದ ಕಾರ್ಯಭಾರವನ್ನು ಸೂಕ್ಷ್ಮ ಕಣ್ಣುಗಳ ಮೂಲಕ ಗಮನಿಸುವ ಕಾವಲು ನಾಯಿಯಂತಹ ಮಹತ್ವದ ಸ್ಥಾನವನ್ನು ಈ ಹುದ್ದೆ ಹೊಂದಿದೆ.

ವಿಧಾನಸಭೆಯ ಹೊರಗೆ ಮತ್ತು ಒಳಗೆ ಸರ್ಕಾರದ ಅಕ್ರಮ, ಅನಾಚಾರ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರ ದುರ್ಬಳಕೆಯ ಬಗ್ಗೆ ಜನರ ಪರವಾಗಿ ಧ್ವನಿ ಎತ್ತಬೇಕಿದೆ. ಆದರೆ, ವಿಪಕ್ಷ ನಾಯಕನನ್ನು ಆಯ್ಕೆ ಮಾಡದಿರುವ ಮೂಲಕ ಬಿಜೆಪಿಯು ಸಾಂವಿಧಾನಿಕ ಶೂನ್ಯ ವಾತಾವರಣ ನಿರ್ಮಿಸಿದೆ ಎಂದು ಆರೋಪಿಸಲಾಗಿದೆ.

ಇ‌ದರೊಂದಿಗೆ ರಾಷ್ಟ್ರಪತಿ, ರಾಜ್ಯಪಾಲರು ಮತ್ತು ವಿಧಾನಸಭೆಯ ಸ್ಪೀಕರ್‌ ಅವರಿಗೂ ವಿಪಕ್ಷ ನಾಯಕನನ್ನು ನೇಮಿಸಲು ಬಿಜೆಪಿಗೆ ನಿರ್ದೇಶಿಸಬೇಕು ಎಂದು ಕೋರಿ ಅಮೃತೇಶ್‌ ಅವರು ಮನವಿ ಸಲ್ಲಿಸಿದ್ದಾರೆ.

Related Articles

Back to top button
error: Content is protected !!