ಅಜ್ಜನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಜನ್ಮಸಿದ್ಧ ಹಕ್ಕು ಇದೆಯೇ?.. ಸುಪ್ರೀಂ ಕೋರ್ಟ್ ಹೇಳಿದ್ದೇನು?
Views: 0
ಕನ್ನಡ ಕರಾವಳಿ ಸುದ್ದಿ: ಹಿಂದೂ ಉತ್ತರಾಧಿಕಾರ ಕಾಯ್ದೆ-1956ರ ಅಡಿಯಲ್ಲಿ ಅಜ್ಜನ ಆಸ್ತಿ ವಿಭಾಗವಾಗಿ ತಂದೆಯ ಪಾಲಿಗೆ ಬಂದ ನಂತರ, ಅದು ತಂದೆಯ ವೈಯಕ್ತಿಕ ಆಸ್ತಿಯಾಗುತ್ತದೆಯೇ ವಿನಃ ಅವಿಭಕ್ತ ಕುಟುಂಬದ ಆಸ್ತಿಯಾಗಿ ಉಳಿಯುವುದಿಲ್ಲ. ಹೀಗಾಗಿ ಅಂತಹ ಆಸ್ತಿಯ ಮೇಲೆ ಮೊಮ್ಮಗನಿಗೆ ಹುಟ್ಟಿನಿಂದಲೇ ಯಾವುದೇ ಹಕ್ಕು ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಜ್ಜನಿಂದ ತಂದೆಗೆ ವಿಭಾಗದ ಮೂಲಕ ಬಂದಿದ್ದ ಆಸ್ತಿಯನ್ನು ತಂದೆಯು ಬೇರೆಯವರಿಗೆ ಮಾರಾಟ ಮಾಡಿದ್ದರು. ಇದನ್ನು ಪ್ರಶ್ನಿಸಿ, ಆ ಆಸ್ತಿಯಲ್ಲಿ ತನಗೂ ಅರ್ಧ ಪಾಲು ಬರಬೇಕು ಎಂದು ಕೋರಿ ಮಗ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಆಗಸ್ಟಿನ್ ಜಾರ್ಜ್ ಮಸಿಹ್ ಮತ್ತು ಸುನಿತಾ ಅಗರ್ವಾಲ್ ಅವರಿದ್ದ ದ್ವಿಸದಸ್ಯ ಪೀಠ ವಜಾಗೊಳಿಸಿದೆ.
ಏನಿದು ಪ್ರಕರಣ?
ತಮಿಳುನಾಡಿನ ಎನ್. ರಾಮಕೃಷ್ಣನ್ ಎಂಬುವವರ ಆಸ್ತಿಯು 1994 ರಲ್ಲಿ ರಾಜಿ ತೀರ್ಪಿನ ಮೂಲಕ ಅವರ ಮೊದಲ ದರ್ಜೆಯ ವಾರಸುದಾರರ ನಡುವೆ ಹಂಚಿಕೆಯಾಗಿತ್ತು. ಈ ವಿಭಾಗದಲ್ಲಿ ರಾಮಕೃಷ್ಣನ್ ಅವರ ಮಗನಿಗೆ ನಿರ್ದಿಷ್ಟ ಜಮೀನು ಪಾಲಾಗಿ ಬಂದಿತ್ತು. ಅದೇ ವರ್ಷ ಆತನಿಗೆ ಮಗನೊಬ್ಬ ಜನಿಸಿದ್ದನು.
ಬಳಿಕ 1997 ರಲ್ಲಿ ತಂದೆಯು ತನಗೆ ಬಂದಿದ್ದ ಜಮೀನನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡಿದ್ದರು. ಇದನ್ನು ಪ್ರಶ್ನಿಸಿ, ಅಪ್ರಾಪ್ತ ಮಗನು ತನ್ನ ತಾಯಿಯ ಮುಖಾಂತರ 1997 ರಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದನು. “ಇದು ನಮ್ಮ ಪೂರ್ವಜರ ಆಸ್ತಿ, ನನಗೂ ಹುಟ್ಟಿನಿಂದಲೇ ಇದರಲ್ಲಿ ಸಮಾನ ಪಾಲಿದೆ. ಹೀಗಾಗಿ ಮಾರಾಟವಾದ ಜಮೀನಿನಲ್ಲಿ ನನಗೆ ಅರ್ಧ ಪಾಲು ನೀಡಬೇಕು” ಎಂದು ಆತ ಕೋರಿದ್ದನು.
ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣದ ವಿಚಾರಣೆ ಚೆನ್ನೈ ಸಿವಿಲ್ ಕೋರ್ಟ್ ಮಗನ ಪರವಾಗಿ ಪ್ರಾಥಮಿಕ ತೀರ್ಪು ನೀಡಿತ್ತು.ಮೇಲ್ಮನವಿ ನ್ಯಾಯಾಲಯ: ಈ ಆದೇಶವನ್ನು ರದ್ದುಗೊಳಿಸಿ, “ಸೆಕ್ಷನ್ 8ರ ಅಡಿಯಲ್ಲಿ ತಂದೆಯು ಪಡೆದ ಆಸ್ತಿ ಆತನ ಸಂಪೂರ್ಣ ವೈಯಕ್ತಿಕ ಆಸ್ತಿಯಾಗಿದ್ದು, ಅದರಲ್ಲಿ ಮಗನಿಗೆ ಜನ್ಮಸಿದ್ಧ ಹಕ್ಕಿಲ್ಲ” ಎಂದು ಹೇಳಿತು.
ಮದ್ರಾಸ್ ಹೈಕೋರ್ಟ್: ಮೇಲ್ಮನವಿ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯಿತು.ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಗನು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದನು. ಸುಪ್ರೀಂ ಕೋರ್ಟ್ ತೀರ್ಪಿನ ಅವಲೋಕನಗಳು ಸೆಕ್ಷನ್ 8ರ ಪ್ರಾಮುಖ್ಯತೆ: ಹಿಂದೂ ಉತ್ತರಾಧಿಕಾರ ಕಾಯ್ದೆ, 1956ರ ಸೆಕ್ಷನ್ 8ರ ಪ್ರಕಾರ, ಉಯಿಲು ಬರೆಯದೆ ಮೃತಪಟ್ಟ ಹಿಂದೂ ಪುರುಷನ ಆಸ್ತಿಯು ಮೊದಲಿಗೆ ಆತನ ಮೊದಲ ದರ್ಜೆಯ ವಾರಸುದಾರರಿಗೆ ಸೇರುತ್ತದೆ. ತಂದೆ ಜೀವಂತವಾಗಿರುವಾಗ ಮೊಮ್ಮಗನು ‘ಕ್ಲಾಸ್-1’ ವಾರಸುದಾರನಾಗುವುದಿಲ್ಲ.
ವಿಭಾಗದ ನಂತರ ವೈಯಕ್ತಿಕ ಆಸ್ತಿ: ತಾತನ ಮರಣದ ನಂತರ ಆಸ್ತಿ ವಿಭಾಗವಾದಾಗ, ಪ್ರತಿಯೊಬ್ಬ ವಾರಸುದಾರರಿಗೂ ಸಿಗುವ ಪಾಲು ಅವರ ಸ್ವಂತ ಮತ್ತು ವೈಯಕ್ತಿಕ ಆಸ್ತಿಯಾಗುತ್ತದೆ. ತಂದೆಯ ಪಾಲಿಗೆ ಬಂದ ಆಸ್ತಿಯು, ಆತನ ಮಗನನ್ನು ಒಳಗೊಂಡ ಅವಿಭಕ್ತ ಕುಟುಂಬದ ಆಸ್ತಿಯಾಗಿ ಪರಿಗಣಿತವಾಗುವುದಿಲ್ಲ.
ಜನ್ಮಸಿದ್ಧ ಹಕ್ಕಿಲ್ಲ ಯಾಕೆ?
ಹಳೆಯ ಹಿಂದೂ ಕಾನೂನಿನಲ್ಲಿದ್ದ ಕೆಲವು ನಿಯಮಗಳನ್ನು 1956ರ ಕಾಯ್ದೆ ಬದಲಾಯಿಸಿದೆ. ತಂದೆಯು ಸೆಕ್ಷನ್ 8ರ ಅಡಿಯಲ್ಲಿ ಆಸ್ತಿಯನ್ನು ಸ್ವತಂತ್ರ ಸಾಮರ್ಥ್ಯದಲ್ಲಿ ಪಡೆಯುತ್ತಾರೆಯೇ ಹೊರತು, ತನ್ನದೇ ಕುಟುಂಬದ ‘ಕರ್ತ’ನಾಗಿ ಅಲ್ಲ. ಆಸ್ತಿ ವಿಭಾಗವಾದಾಗಲೇ ಅದು ಜಂಟಿ ಕುಟುಂಬದ ಆಸ್ತಿಯಾಗಿ ಉಳಿಯುವುದು ನಿಂತುಹೋಗುತ್ತದೆ. ಹೀಗಾಗಿ, ತಂದೆ ಬದುಕಿರುವ ತನಕ ಆತನ ಪಾಲಿನ ಆಸ್ತಿಯಲ್ಲಿ ಮಗನಿಗೆ ಹುಟ್ಟಿನಿಂದ ಯಾವುದೇ ಪಾಲುದಾರಿಕೆ ಅಥವಾ ಹಕ್ಕು ಸಿಗುವುದಿಲ್ಲ.
ತಂದೆಯು ಆಸ್ತಿ ಮಾರಾಟ ಮಾಡಿದ್ದನ್ನು ಅಥವಾ 1994ರ ರಾಜಿ ತೀರ್ಪನ್ನು ಅರ್ಜಿದಾರರು ಪ್ರಶ್ನಿಸದೇ, ಕೇವಲ ಜನ್ಮಸಿದ್ಧ ಹಕ್ಕಿನ ಆಧಾರದ ಮೇಲೆ ಪಾಲು ಕೇಳಿರುವುದು ಕಾನೂನುಬದ್ಧವಾಗಿ ಸರಿಯಲ್ಲ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿಹಿಡಿದು ಅರ್ಜಿಯನ್ನು ವಜಾಗೊಳಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.






